Saturday, December 18, 2010

*** ‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ. ***




          ಹಾರ್ನ್ ಬಿಲ್ ಹಕ್ಕಿಗೆ ‘ನಶೆ’ ಏರುತ್ತದೆಯೇ?! ಆಗಾಗ ಏರುತ್ತದೆ! ಏರಿದ್ದು ಇಳಿಯುವವರೆಗೆ ಆಗಸಕ್ಕೆ ಲಗ್ಗೆ ಹಾಕಬಲ್ಲ ಈ ಕೌತುಕದ ಪಕ್ಷಿ ಭೂಮಿಗಿಳಿಯುತ್ತದೆ!

         ವನ್ಯಜೀವಿಗಳ ಖ್ಯಾತ ಛಾಯಾಗ್ರಾಹಕ ನರೇಂದ್ರ ಪಾಟೀಲ್ ಕವಳೇಶ್ವರ ಗುಡ್ಡದಲ್ಲಿ ಕ್ಲಿಕ್ಕಿಸಿದ ಅಪರೂಪದ ಫೊಟೋ ಇದು. ಖ್ಯಾತ ಪರಿಸರಪ್ರೇಮಿಗಳಾದ ಪ್ರೊ. ಗಂಗಾಧರ ಕಲ್ಲೂರ ಹಾಗೂ ಪ್ರೊ. ಆಂಟೋನಿ ಅವರೊಂದಿಗೆ ಕವಳೇಶ್ವರ ಗುಡ್ದದಲ್ಲಿ ಚಾರಣ ಕೈಗೊಂಡಾಗ ‘ನಶೆ ಏರಿದ್ದ ರಿಂದ’ ಸುಸ್ತು ಹೊಡೆದು - ಬಳಲಿ, ನೆಲಕ್ಕೊರಗಿದ್ದ ಮಲಬಾರ್ ಪೈಡ್ ಹಾರ್ನ್ ಬಿಲ್ ಪಕ್ಷಿ ಕೈಗೆ ಸಿಕ್ಕಾಗ ತೆಗೆದ ಛಾಯಾಚಿತ್ರವದು. ಆಕಸ್ಮಿಕವಾಗಿ ಕೈಗೆ ಸಿಕ್ಕ, ನಿಸರ್ಗದ ಕೌತುಕವೊಂದರ ಆರೈಕೆಯಲ್ಲಿ ಅವರು ತೊಡಗಿದ ಮಾನವೀಯ ಕಳಕಳಿಯ ದೃಷ್ಯವಿದು.
ಮಲಬಾರ್ ಪೈಡ್ ಹಾರ್ನ್ ಬಿಲ್ (ಮಂಗಟ್ಟೆ ಹಕ್ಕಿ) ಪಶ್ಚಿಮ ಘಟ್ಟದ ಕಾಡುಗಳಿಗೆ ಹೊಂದಿಕೊಂ ಡಿರುವ ಹಳಿಯಾಳ, ದಾಂಡೇಲಿ ಹಾಗೂ ಅಂಬಿಕಾನಗರಗಳಲ್ಲಿ ಕಾಡಿನ ಆರೋಗ್ಯ ಸೂಚಕ ಪಕ್ಷಿಯಾಗಿ ಗುರುತಿಸಲ್ಪಡುತ್ತದೆ. ಈ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಕಾಡು ಆರೋಗ್ಯಪೂರ್ಣವಾಗಿದೆ ಎಂದರ್ಥ. ಸಂಖ್ಯೆ ಕ್ಷೀಣಿಸಿದ್ದರೆ ಕಾಡಿನ ಯಾವುದೋ ಭಾಗದಲ್ಲಿದ್ದ ಹಣ್ಣಿನ ಮರಗಳು ಆಹುತಿಯಾಗಿವೆ; ಹಾಗಾಗಿ ಕಾಡಿನ ಸಮತೋಲನ ತಪ್ಪಿ ಅನಾರೋಗ್ಯ ಅಪ್ಪಳಿಸಿದೆ ಎಂದು ಗಣಿಸಲಾಗುತ್ತದೆ.


          ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಗೆ ಹಿಂದಿ ಭಾಷೆಯಲ್ಲಿ ‘ಧನ್ ಛಿರಿ’, ಬಂಗಾಳಿಯಲ್ಲಿ ‘ಬಾಗ್ಮಾ ಧನೇಶ್’, ಓರಿಯಾದಲ್ಲಿ ‘ಕುಛಲಾ ಖಾ’, ಮರಾಠಿಯಲ್ಲಿ ‘ವಯೇರಾ’, ಕೊಂಕಣಿಯಲ್ಲಿ ‘ಕನಾರಿ’, ತಮಿಳಿನಲ್ಲಿ ‘ಇರಟ್ಟಾಯ್ ಛೋಂಡು ಕುರುವಿ’, ಮಲಯಾಳಿಯಲ್ಲಿ ‘ವೆಝಂಬಾಲ್’ ಎಂದು ಕರೆಯಲಾಗುತ್ತದೆ. ಅಂಜೂರ ಜಾತಿಯ ಅತ್ತಿ, ಆಲ, ಬಸರಿ ಸೇರಿದಂತೆ ಎಲ್ಲ ತರಹದ ಕಾಡಿನ ಹಣ್ಣಿನ ಮರಗಳಲ್ಲಿ ಗುಂಪು ಗೂಡಿ ಮಕ್ಕಳಂತೆ ಗಲಾಟೆ ಎಬ್ಬಿಸಿ ಹಣ್ಣುಗಳನ್ನು ಹೆಕ್ಕುವು ದು ನಯನ ಮನೋಹರ ದೃಶ್ಯ.


       ಅನಿವಾರ್ಯ ಪ್ರಸಂಗಗಳಲ್ಲಿ ಹಲ್ಲಿ, ಓತಿಕ್ಯಾತ, ಇಲಿ, ಮರಿ ಹೆಗ್ಗಣ ಮರಿ ಪಕ್ಷಿಗಳನ್ನು ಸಹ ಹಾರ್ನ್ ಬಿಲ್ ಕಬಳಿಸಬಲ್ಲುದು ಎನ್ನುತ್ತಾರೆ ಡಾ. ಸಲೀಂ ಅಲಿ. ಮಂಗಟ್ಟೆ ಹಕ್ಕಿ ಕೂಗಿದಾಗ ಕೇಕೆ ಹೊಡೆದು ನಕ್ಕ ಹಾಗೆ ಭಾಸವಾಗುತ್ತದೆ. ಮರದಿಂದ ಮರಕ್ಕೆ ಹಾರುವಾಗ ರೆಕ್ಕೆ ಬಡಿದು ತೇಲುವ ಅವುಗಳ ಕ್ಷಮತೆ ಹೆಲಿಕಾಪ್ಟರ್ ನೆನಪಿಸುವಂತಿರುತ್ತದೆ.


      ಮಲಬಾರ್ ಪೈಡ್ ಹಾರ್ನ್ ಬಿಲ್ ತಿನ್ನುವ ಹಣ್ಣುಗಳು ಅತ್ಯಂತ ಮಾಗಿದ್ದು, ಕಳೆತ ಹಾಗೂ ಇನ್ನೇನು ಕೊಳೆಯುವ ಸ್ಥಿತಿ ತಲುಪಿದ್ದರೆ; ಮತ್ತು, ಅದು ದೀರ್ಘ ಕಾಲದ ಉಪವಾಸದ ನಂತರ ಏಕಾಏಕಿ ಗರಿಷ್ಠ ಪ್ರಮಾಣದಲ್ಲಿ ಅಂತಹ ಕಳೆತ ಹಣ್ಣುಗಳನ್ನು ತಿಂದಾಗ ಆಯ ತಪ್ಪಿ ನೆಲಕ್ಕೊರ ಗುತ್ತದೆ. ಹಾಗೆ ತಲೆ ಸುತ್ತಿದಾಗ ಕೂಡಲೇ ಸುಧಾರಿಸಿಕೊಳ್ಳಲು ಅದಕ್ಕೆ ನೀರು ದೊರಕದೇ ಹೋದಾಗ ಹಕ್ಕಿಯ ಜಠರದಲ್ಲಿ ಕಳೆತ-ಕೊಳೆತ ಹಣ್ಣುಗಳ ‘Firmentation‘ ದಿಂದಾಗಿ ‘ಅಲ್ಕೋ ಹಾಲ್’ ಉತ್ಪತ್ತಿಯ ಪ್ರಮಾಣ ಹೆಚ್ಚಾಗಿ ಬವಳಿ ಬಂದಂತಾಗಿ ಬೃಹತ್ ದೇಹಿ ಧರಾಶಾಯಿ ಆಗುತ್ತ ದೆ ಎನ್ನುತ್ತಾರೆ ಪ್ರೊ. ಗಂಗಾಧರ ಕಲ್ಲೂರ.


      ಖುಷಿಯಿಂದ ಚಾರಣ ಪ್ರಿಯರೆಲ್ಲ ಈ ಮಂಗಟ್ಟೆಯನ್ನು ಕವಳೇಶ್ವರದ ಸಾವಿರ ಮೆಟ್ಟಿಲುಗಳ ಮೇಲೆ ಒಯ್ದು ಅಲ್ಲಿಂದ ರೆಕ್ಕೆ ಅಗಲಿಸಿ ಹಾರಿ ಬಿಟ್ಟರು. ಗೆಲುವಾಗಿದ್ದ ಹಾರ್ನ್ ಬಿಲ್ ತುಸು ದೂರ ಕೆಳ ಮಟ್ಟದಲ್ಲಿ ಹಾರಿ ನಂತರ ಆಗಸಕ್ಕೆ ಚಿಮ್ಮಿ ಹಾರಿತು!


       ರಣ ಹದ್ದಿನ ಗಾತ್ರದ ಈ ಹಕ್ಕಿಗೆ ಅಗಾಧವಾದ ಕೊಕ್ಕಿನ ಮೇಲೆ ಖಡ್ಗ ಮೃಗಕ್ಕಿರುವಂತೆ ಕೊಂಬು. ಕುತ್ತಿಗೆ ಹಾಗೂ ರೆಕ್ಕೆಗಳ ಬಣ್ಣ ಕಪ್ಪು. ಕೆಲವು ಮಂಗಟ್ಟೆಗಳಿಗೆ ಕುತ್ತಿಗೆ ಹಾಗೂ ಎದೆಯ ಮೇಲೆ ಬಿಳಿ ಪಟ್ಟಿಗಳಿರುತ್ತವೆ. ಗಲ್ಲದ ಬಳಿ ಕೆಂಪು ಪಟ್ಟಿ ಸಹ ಇರಬಹುದು. ಉದ್ದವಾದ ಬಿಳಿ ಬಾಲದ ತುದಿಯಲ್ಲಿ ಕಪ್ಪು ಪಟ್ಟಿಗಳು ಹಕ್ಕಿಯ ಸೌಂದರ್ಯಕ್ಕೆ ಕಿರೀಟವಿಟ್ಟಂತೆ ಭಾಸವಾಗುತ್ತದೆ. ರೆಕ್ಕೆಗಳ ಅಂಚಿನಲ್ಲಿರುವ ಬಿಳಿ ಪಟ್ಟಿಗಳು ಹಕ್ಕಿ ಹಾರಿದಾಗ ಸ್ಪಷ್ಟವಾಗಿ ಕಾಣುತ್ತವೆ. ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿ, ಕರ್ನಾಟಕದ ಮುಕುಟವಾಗಿರುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಂಡುಬರುತ್ತವೆ. ಪರಿಸರ ಹಾನಿ, ಹಣ್ಣಿನ ಮರಗಳ ಕೊರತೆ ಹಾಗೂ ಶಿಕಾರಿಗಳ ದೆಸೆಯಿಂದ ಈ ದೊಡ್ಡ ಮಂಗಟ್ಟೆ ಹಕ್ಕಿಗಳು ವಿನಾಶದ ಅಂಚಿಗೆ ತಲುಪಿವೆ ಎನ್ನುತ್ತಾರೆ ತಜ್ಞರು.


         ಲಕ್ಷಾಂತರ ಸೂಕ್ಷ್ಮ ಕೊಂಡಿಗಳನ್ನು ತನ್ನೊಳಗೆ ಬೆಸೆದುಕೊಂಡಿರುವ ಸಂಕೀರ್ಣ ವ್ಯವಸ್ಥೆ ಅದು.) ವೃಕ್ಷಾರೋಪಣ ಕಾರ್ಯಕ್ರಮ ಮಾಡಿದೆವು. ಫಲವಾಗಿ ಕಾಡಿನ ಹಣ್ಣಿನ ಗಿಡಗಳು ಹೇಳಹೆಸರಿಲ್ಲ ದಂತಾದವು. ಹಾಗಾಗಿ ಬದುಕಲು ಅನಿವಾರ್ಯವಾಗಿ ಹಣ್ಣಿನ ಗಿಡಗಳನ್ನು ಅರಸಿಕೊಂಡು ನೂರಾರು ಕಿಲೋ ಮೀಟರ್ ಗಂಡು ಮಂಗಟ್ಟೆ ಹಕ್ಕಿ ಕ್ರಮಿಸಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ. ಇದು ಕಾಡಿಗೆ ತಗುಲಿರುವ ಅನಾರೋಗ್ಯದ ಸೂಚಕವಲ್ಲದೇ ಮತ್ತೇನು?"

         ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಯ ವಿಶೇಷವೆಂದರೆ ಸಂತಾನಾಭಿವೃದ್ಧಿ ಕಾಲಕ್ಕೆ ಹೆಣ್ಣು ಹಕ್ಕಿ ಕಾಡಿನ ಮಧ್ಯದ ದೊಡ್ಡ ಮರವನ್ನು ಹುಡುಕುತ್ತದೆ. ಅತ್ಯಂತ ಎತ್ತರದಲ್ಲಿ ಪೊಟರೆ ಕೊರೆದು ತಾನು ಅದರೊಳಗೆ ಇಳಿಯುತ್ತದೆ. ಘೇಂಡಾಮೃಗದಂತೆ ಕೊಕ್ಕಿನ ಮೇಲೆ ದೊಡ್ಡ ಕೊಂಬಿರುವ ಕಾರಣ ಆ ಹದ್ದಿನ ಗಾತ್ರದ ಹಕ್ಕಿಗೆ ಇಡಿಯಾಗಿ ಆ ಬಿಲದೊಳಗೆ ತೂರಿಕೊಳ್ಳುವುದು ಸಾಧ್ಯವಾ ಗದ ಮಾತು. ಹಾಗಾಗಿ ಹೆಣ್ಣು ಮಂಗಟ್ಟೆ ಸಮರ್ಪಕವಾದ ಆಕಾರಕ್ಕೆ ಗೂಡನ್ನು ತರಲು ಗಂಡಿನ ಸಹಾಯದಲ್ಲಿ ಪೊಟರೆ ಕೊರೆಯುತ್ತ ಹೋಗುತ್ತದೆ. ಗೂಡು ಸಮರ್ಪಕವಾಗಿದೆ ಎನಿಸಿದಾಗ ಹೆಣ್ಣು ಮಂಗಟ್ಟೆ ಒಳಹೊಕ್ಕು ಕೇವಲ ಒಂದು ಮೊಟ್ಟೆ ಇಡುತ್ತದೆ. (ಕೆಲವೊಮ್ಮೆ ೨ ಮೊಟ್ಟೆಗಳನ್ನು ಸಹ ಇಟ್ಟ ಉದಾಹರಣೆಗಳಿವೆ; ನಾಲ್ಕು ಮೊಟ್ಟೆ ಇಟ್ಟ ದಾಖಲೆ ಸಹ ಇದೆ, ಆದರೆ ಮರಿ ಮಾತ್ರ ಒಂದು ಬದುಕಬಹುದು) ಮೊಟ್ಟೆಯ ಬಣ್ಣ ಬಿಳಿ ಹಾಗೂ ಕಟ್ಟಿಗೆ ಕಂದು ಬಣ್ಣ ಹೋಲುತ್ತದೆ.


            ಮೊಟ್ಟೆ ಇಟ್ಟ ತಕ್ಷಣ ಕೇವಲ ಕೊಕ್ಕು ಮಾತ್ರ ಹೊರಬರುವಂತೆ ವ್ಯವಸ್ಥೆ ಮಾಡಿಕೊಂಡು ಬಾಯಿ ಯ ಜೊಲ್ಲು, ಗಿಡದ ರಾಳ ಹಾಗೂ ಅಂಟು ಬಳಸಿ ಇಡೀ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ಬಿಡುತ್ತದೆ. ಗಂಡು ಮಂಗಟ್ಟೆ ತನ್ನ ಪತ್ನಿಗೆ ಆಹಾರ ಒದಗಿಸುವ ಸೇವಕನ ಕೆಲಸಕ್ಕೆ ಅಣಿಯಾಗು ತ್ತದೆ. ಇತ್ತ ಪೊಟರೆಯೊಳಗೆ ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುತ್ತ, ತನಗೆ ಹಾಗೂ ಮೊಟ್ಟೆ ಒಡೆದು ಜೀವ ತಳೆಯಲಿರುವ ಮರಿಗೆ ಜಾಗೆ ಸಾಲದು ಎಂಬ ಕಾರಣಕ್ಕೆ ತನ್ನೆಲ್ಲ ಪುಕ್ಕಗಳನ್ನು ಕಿತ್ತು ಹೊರಗೆಸೆದು ಸಂಪೂರ್ಣ ಬೋಳಾಗಿ ಹಾರಲಾಗದ ಸ್ಥಿತಿಗೆ ತಲುಪುತ್ತದೆ.




              ಹಾಗೆಯೇ, ಚಿಕ್ಕ ಗರಿಗಳನ್ನು ಬಳಸಿ ತನ್ನ ಮರಿಗೆ ಪೊಟರೆಯ ಒಳಗೆ ‘ಬೆಡ್’ಸಹ ನಿರ್ಮಾಣ ಮಾಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬಂದು ಹಾರುವ ಸ್ಥಿತಿ ತಲುಪುವ ವೇಳೆಗೆ ತಾಯಿ ಹಕ್ಕಿ ಸಹ ತನ್ನ ರೆಕ್ಕೆಯ ಗರಿಗಳನ್ನು ಮರಳಿ ಪಡೆದುಕೊಂಡಿರುತ್ತದೆ. ಈ ಮಧ್ಯೆ, ಗಂಡು ಹಕ್ಕಿ ತನ್ನ ಕೊಕ್ಕಿನಲ್ಲಿ ನೀರನ್ನು ಹಿಡಿದು ತರಲು ಸಾಧ್ಯವಾಗದ್ದರಿಂದ ನೀರಿನ ಅಂಶ ಹೇರಳವಾಗಿರುವ ಹಣ್ಣುಗಳನ್ನೇ ಹುಡುಕಿ ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ತಂದು ತಾಯಿ ಹಾಗೂ ಮರಿ ಹಕ್ಕಿಗೆ ಉಣಬಡಿಸುತ್ತದೆ. ಸಮಯ ಸಿಕ್ಕಾಗ ತಾನೂ ತನ್ನ ಉದರಂಭರಣ ಮಾಡಿಕೊಳ್ಳುತ್ತದೆ. ಕೆಲ ವೊಮ್ಮೆ ತಾನು ಉಪವಾಸ ಉಳಿದು ತನ್ನವರಿಗಾಗಿ ಹಣ್ಣನ್ನು ಸಹ ಹೆಕ್ಕಿತರುತ್ತದೆ ಗಂಡು ಮಲ ಬಾರ್ ಪೈಡ್ ಹಾರ್ನ್ ಬಿಲ್!

        ಇತ್ತ ಗೂಡಿನಲ್ಲಿ ಹಾರಲಾಗದ ಸ್ಥಿತಿಯಲ್ಲಿ ಬಂಧಿಯಾದ ಹೆಣ್ಣು ಮಂಗಟ್ಟೆಗೆ ಬೇಟೆಗಾರರ ಕಾಟ ಸಹ ಇಲ್ಲವೆಂದಲ್ಲ. ಕಾಡು ಬೋಳಾಗಿ ಕೆಲವೇ ಎತ್ತರದ ಮರಗಳು ಉಳಿದಿರುವ ‘ಹೆಸರಿಗೆ ಕಾಡು’ಗಳಲ್ಲಿ ಬೇಟೆಗಾರರ ಹದ್ದಿನ ಕಣ್ಣುಗಳಿಗೆ ಎತ್ತರದ ಮರದ ಮೇಲೆ ಪೊಟರೆಯೊಳಗಿಂದ ತನ್ನ ದೊಡ್ಡ ಕೊಂಬನ್ನು ಹೊರ ಚಾಚಿ ಕುಳಿತ ತಾಯಿ ಹಕ್ಕಿಯನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಸಹಜವಾಗಿ ಬೇಟೆಗಾರರ ಬಲಿಗೆ ಆಹುತಿಯಾಗುವ ಹೆಣ್ಣು ಹಕ್ಕಿ, ಅದರ ಮರಿ ಅಥವಾ ಮೊಟ್ಟೆ, ಗಂಡು ಹಕ್ಕಿಯನ್ನು ಜೀವನಪರ್ಯಂತ ಏಕಾಂಗಿ ಆಗಿಸಿಬಿಡುತ್ತದೆ.



***ಸಂಗ್ರಹ***

***ಹೀಗೊಂದು ಕಥೆ***

ಪ್ರಿಯ ಗೆಳೆಯರೇ,...........

ಕಷ್ಟದ ಕೋಟೆಯೊಳಗೆ ಬಾಲ್ಯವನ್ನು ಸವೆಸಿದ ರಝೂಕ್ ಬೆಳೆದದ್ದು ನರಸಿಂಹಪುರದಲ್ಲಿ. ಹಣದ ಕೊರತೆಯಿಂದ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಊರಿನ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಸುಮಾರು ನಾಲ್ಕು ವರ್ಷ ಕೆಲಸ ಮಾಡಿ ದುಡಿದು ಸಂಗ್ರಹಿಸಿದ ಅಲ್ಪ ಸ್ವಲ್ಪ ಹಣದಲ್ಲಿ ತಾನು ಸ್ವಾವಲಂಬಿಯಾಗಬೇಕೆಂಬ ಉತ್ಕಟ ಅಭಿಲಾಷೆಯಿ೦ದ ರಝಾಕ್ ಸ್ವಂತ ದಿನಸಿ ಅಂಗಡಿಯೊಂದನ್ನು ತೆರೆದು ಹೊಸ ದುಡಿಮೆಯ ಮೂಲಕ ಹೊಸ ಬದುಕನ್ನು ಕಂಡವರು. ಹೆತ್ತವರನ್ನು, ಅಣ್ಣಂದಿರನ್ನು, ತಂಗಿಯಂದಿರನ್ನು ತನ್ನ ಸಂಸಾರದ ಬಂಡಿಯಲ್ಲೇ ಹೊತ್ತೊಯ್ದು ಮಾದರಿ ಜೀವನ ಸಾಗಿಸಿದವರು. ರಝಾಕ್‌ರಿಗೆ ಸುಮಯ್ಯ ಅರ್ಧಾಂಗಿನಿಯಾಗಿ ಸಾಥ್ ನೀಡಿದರು. ತುಂಬಿದ ಮನೆಯಲ್ಲಿ ಅಮೀರ್ ಮತ್ತು ಝಲೈಖಾ ಎಂಬ ಹೆಸರಿನ ಇಬ್ಬರು ಮಕ್ಕಳು ಹುಟ್ಟಿ ಬಂದರು. ಮನೆ ನಂದನವಾಯಿತು. ಮಕ್ಕಳಿಗೆ ಪದೇ ಪದೇ ತಾವು ಬೆಳೆದು ಬಂದ ರೀತಿಯನ್ನು ಹೇಳುತ್ತಾ, ಸ್ವಾವಲಂಬಿಯಾಗಿ ಬಾಳಲು ಪ್ರೇರೇಪಿಸುತ್ತಿದ್ದರು ರಝಾಕ್.

ಒಳ್ಳೆಯ ಪರಿಸರದಲ್ಲೇ ಬೆಳೆದ ಅಮೀರ್, ಕಾಲೇಜು ಶಿಕ್ಷಣ ಮುಗಿಸಿ ಅಧ್ಯಾಪಕ ವೃತ್ತಿಗೆ ಸೇರಿಕೊಂಡ. ಊರಿನಲ್ಲಿ ರಝಾಕ್‌ರ ಕುಟುಂಬಕ್ಕೆ ವಿಶೇಷ ಮರ್ಯಾದೆಯೂ ಇತ್ತು. ಎಲ್ಲರೂ "ಅಮೀರ್ ಸಾರ್" ಎಂದು ಕರೆಯುವಾಗ ರಝಾಕ್ ಸಾಹೇಬರಿಗೆ ಎಲ್ಲಿಲ್ಲದ ಖುಷಿ. ಒಳಗೊಳಗೆ ಮಗನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಇತ್ತು ಝುಲೈಖಾಳಿಗೂ ಒಳ್ಳೆಯ ಸಂಬಂಧ ಕೂಡಿ ಬಂತು. ಝುಲೈಖಾ ಪತಿಯ ಮನೆ ಸೇರಿದಳು. ಇನ್ನು ಅಮೀರ್ ನ ಮದುವೆ ಮಾತ್ರ ಉಳಿದಿರುವುದು.

ಮನೆಯವರೆಲ್ಲರೂ ಅಮೀರ್ ನ ಮದುವೆಯ ಕುರಿತು ಆಲೋಚಿಸುತ್ತಿದ್ದರು. ಅಮೀರ್‌ಗೆ ಪಕ್ಕದ ಊರಿಗೆ ವರ್ಗಾವಣೆಯೂ ಆಯಿತು. ವಾರಕ್ಕೊಮ್ಮೆ ಮನೆಗೆ ಬರಲು ಮಾತ್ರ ಸಾಧ್ಯವಾಗುತ್ತಿತ್ತು. ರಝಾಕ್, ಸುಮಯ್ಯಾರಿಗೆ ಮೊದಲು ಅಮೀರ್ ನನ್ನು ಬಿಟ್ಟಿರಲು ಸಾಧ್ಯವಾಗದಿದ್ದರೂ ವಾರಕ್ಕೊಮ್ಮೆಯಾದರೂ ಮಗನ ಮುಖ ನೋಡಿ ಸಂತೋಷ ಪಡುತ್ತಿದ್ದರು.

ಹೀಗೆ ಒಂದು ದಿನ...........
ಚಿಕನ್ ಸ್ಟಾಲ್‌ನ ಅಬ್ದುಲ್ಲಾ ತನ್ನ ಕಡೆಗೆ ಓಡೋಡಿ ಬರುತ್ತಿರುವುದನ್ನು ಕಂಡು ರಝಾಕ್‌ರಿಗೆ ಗಾಬರಿಯಾಯಿತು. ಏನೂ ಮಾತನಾಡದೆ ಒಂದೇ ಸಮನೆ ಉಸಿರು ಬಿಡುತ್ತಿದ್ದರು. ರಝಾಕ್‌ರಿಗೆ ಏನೆಂದೇ ತೋಚಲಿಲ್ಲ.
"ಬನ್ನಿ ನನ್ನ ಜೊತೆ, ನಿಮ್ಮ ಮಗನಿಗೆ ಏನೂ ಆಗಿಲ್ಲ" ಎಂದು ಒಗೊಟೊಗಟಾಗಿ ಮಾತನಾಡಿದರು.
ರಝಾಕ್‌ರ ಮನದಲ್ಲಿ ಏನೆಲ್ಲಾ ಚಿಂತೆಗಳು ಶುರುವಾದವು.

 ಚಿಕ್ಕ ಮಗುವಿನಂತೆ ಅಬ್ದುಲ್ಲಾರನ್ನೇ ಹಿಂಬಾಲಿಸಿದರು. ಹೀಗೆ ಅಬ್ದುಲ್ಲಾ ಕರೆದುಕೊಂಡು ಹೋದದ್ದು ದೊಡ್ಡದೊಂದು ಆಸ್ಪತ್ರೆಗೆ. ಅಲ್ಲಿ ಶಾಲೆಯ ಮಕ್ಕಳೂ ಇದ್ದಾರೆ, ಕೆಲವು ಮಂದಿ ಅಧ್ಯಾಪಕರೂ ಇದ್ದಾರೆ. ಆದರೆ ಮಗ ಅಮೀರ್ ಕಾಣುತ್ತಿಲ್ಲ.
"ಏನಾಯಿತು ನನ್ನ ಮಗನಿಗೆ? ಏನಾಯಿತು ನನ್ನ ಮಗನಿಗೆ?" ಎಂದು ರಝಾಕ್ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದರು.
"ಏನೂ ಆಗಿಲ್ಲ, ರೈಲು ಹಳಿ ದಾಟುವಾಗ ಅಪಘಾತವಾಗಿ ಕಾಲಿಗೆ ಗಾಯವಾಗಿದೆ ಅಷ್ಟೇ" ಎಂದು ಯಾರೋ ಒಬ್ಬರು ಸಮಾಧಾನಿಸಿದರು.
ಇದನ್ನು ಕೇಳಿ ರಝಾಕ್ ಸಾಹೇಬರು ಮೂರ್ಛೆ ತಪ್ಪಿ ಬಿದ್ದುಬಿಟ್ಟರು.

ಅಮೀರ್‌ನ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಮೀರ್ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದಾನೆ. ಯಾವುದೇ ಗಾಯದ ಗುರುತುಗಳಿಲ್ಲ. ಕಾಲಿಗೆ ಹೊದಿಸಲಾಗಿದ್ದ ಬಟ್ಟೆಯನ್ನು ಸರಿಸಿದರು ಸುಮಯ್ಯಾ.
"ಯಾ ಅಲ್ಲಾಹ್!"
ಮಗನ ಕಾಲನ್ನು ಕತ್ತರಿಸಲಾಗಿತ್ತು. ಒಂದು ಕಾಲನ್ನು ಕಳೆದುಕೊಂಡಿದ್ದರೂ ನಗು ಮುಖ ಬೀರುತ್ತಿದ್ದ ಅಮೀರ್‌ನನ್ನು ಕಂಡು ಹೆತ್ತ ಕರುಳು ಚುರುಗುಟ್ಟಿತು.
ಅಮೀರ್‌ನನ್ನು ಆಂಬುಲೆನ್ಸ್‌ನಲ್ಲೇ ಮನೆಗೆ ಕರೆ ತರಲಾಯಿತು. ಅಪ್ಪ, ಅಮ್ಮ, ಅಣ್ಣಂದಿರು, ತಂಗಿಯಂದಿರು ಅಮೀರ್‌ನಿಗೆ ಸಾಥ್ ನೀಡುತ್ತಿದ್ದಾರೆ. ಅತ್ತಿತ್ತ ಹೋಗಲು ತುಂಬಿದ ಮನೆಯಲ್ಲಿ ಸಾಕಷ್ಟು ಮಂದಿ ಹೆಗಲು ನೀಡುತ್ತಿದ್ದರು. ಅಮೀರ್ ಸಾರ್‌ರನ್ನು ನೋಡಲು ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಬರುತ್ತಿದ್ದರು.
*********************************
ವರ್ಷವೊಂದು ಕಳೆಯಿತು.  ಅಮೀರ್ ಗೆ ಕೃತಕ ಕಾಲಿನ ಆಸರೆ ನೀಡಲಾಯಿತು. ಅಮೀರ್ ಎದ್ದು ಮತ್ತೆ ಚಲಿಸತೊಡಗಿದ. ಹೆತ್ತ ಕರುಳಿಗೆ ಮಗನ ಯಾತನೆ ಅರ್ಥವಾಗುತ್ತಿತ್ತು. ಮದುವೆ ವಿಚಾರ ಮತ್ತೆ ಚರ್ಚೆಯಾಗತೊಡಗಿತು. ಅಮೀರ್  ನಿಗೆ ಚಂದದೊಂದು ಹೆಣ್ಣನ್ನು ನೋಡಿ ಮದುವೆ ಮಾಡಬೇಕು ಎಂದು ಅಜ್ಜ - ಅಜ್ಜಿ ಮಾತನಾಡತೊಡಗಿದರು. ಆದರೇನಂತೆ! ಒಂದು ಕಾಲನ್ನು ಕಳೆದುಕೊಂಡಿರುವ ಅಮೀರ್‌ಗೆ ಯಾರು ಹೆಣ್ಣು ನೀಡುತ್ತಾರೆ? ಎಂದು ಸುಮಯ್ಯಾ ಚಿಂತಿಸತೊಡಗಿದರು.
ಹಲವು ಕಡೆ ಹೆಣ್ಣು ನೋಡಲಾಯಿತು. ಅಮೀರ್ ನ ವೃತ್ತಿ, ಸೌಂದರ್ಯ, ವಿದ್ಯಾಭ್ಯಾಸ ಗೆದ್ದರೂ ಕುಂಟುತನ ಸೋಲುತ್ತಿತ್ತು. ಈ ಹಿಂದೆ ಅಮೀರ್‌ನಿಗೆ ಹೆಣ್ಣು ನೀಡಲು ಮುಂದೆ ಬಂದಿದ್ದವರು ಈಗ ತಲೆಮರೆಸಿಕೊಂಡಿದ್ದರು. ಆ ದೇವ ನನ್ನ ಹಣೆಯಲ್ಲಿ ಏನು ಬರೆದಿದ್ದಾನೋ ಅದೇ ನಡೆಯುತ್ತದೆ ಎಂಬುದಾಗಿತ್ತು ಅಮೀರ್ ನ ಅಚಲ ನಿಲುವು.
ದೂರದಿಂದ ಸಂಬಂಧವೊಂದು ಕೂಡಿ ಬಂತು. ಅದು ಅಮೀರ್ ಶಿಕ್ಷಕನಾಗಿ ವೃತ್ತಿ ಮಾಡುತ್ತಿದ್ದ ಊರಿನಿಂದ ಬಂದ ಸಂಬಂಧವಾಗಿತ್ತು. ಹೆಸರು ಆಯಿಶಾ. ರಹೀಮ್ - ನಸೀಮಾ ದಂಪತಿಯ ಏಕೈಕ ಮಗಳು. ಸೌಂದರ್ಯ, ಶ್ರೀಮಂತಿಕೆ, ಗುಣ ಇವು ಯಾವುದರಲ್ಲೂ ಕೊರತೆಯಿರಲಿಲ್ಲ. ಆದರೆ ಅಮೀರ್ ನನ್ನು ನೋಡಿದ್ದೇ ತಡ, ಆಯಿಶಾ ಒಪ್ಪಿಕೊಂಡಳು, ಮಗಳ ಒಪ್ಪಿಗೆಗೆ ರಹೀಮ್ - ನಸೀಮಾ ತಲೆಯಾಡಿಸಿದರು. ಅಮೀರ್‌ನ ಕುಂಟುತನ ಆಯಿಶಾಳೆದುರು ಪರಿಗಣನೆಗೆ ಬರಲಿಲ್ಲ.
ಆಯಿಶಾಳ ಗೆಳತಿಯರು ಆಗಾಗ ಫೋನು ಮಾಡುತ್ತಿದ್ದರು.
"ಅಮೀರ್‌ನಿಗೆ ಒಂದು ಕಾಲು ಸರಿಯಿಲ್ಲ. ನೀನೇಕೆ ಅವನನ್ನು ಒಪ್ಪಿಕೊಂಡೆ?" ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ಆದರೆ ಆಯಿಶಾ ಏನೂ ಮಾತನಾಡಲಿಲ್ಲ. ಆಕೆಯ ಮೌನವೇ ಉತ್ತರವಾಗಿತ್ತು.
ಗೆಳತಿಯರ ಫೋನು ಅತಿಯಾಗತೊಡಗಿತು. ಆಯಿಶಾಳ ಮೌನವೂ ಮುರಿಯಿತು.
"ನಾನು ಸರಿಯಾದ ತೀರ್ಮಾನವನ್ನೇ ತೆಗೆದುಕೊಂಡಿರುವೆ. ಅಮೀರ್ ಕುಂಟನಾದರೂ, ಕುರುಡನಾದರೂ ನಾನು ಅವರನ್ನೇ ಮದುವೆಯಾಗುವೆ. ಇದು ನನ್ನ ಜೀವನದ ವಿಚಾರ. ಯಾರೂ ಇದರಲ್ಲಿ ಮೂಗು ತೂರಿಸಬೇಡಿ" ಎಂದು ಖಾರವಾಗಿ ಪ್ರತಿಕ್ರಿಯಿಸಿದಳು.

ಅಮೀರ್ - ಆಯಿಶಾಳ ಮದುವೆ ಸಂಭ್ರಮದಿಂದ ನಡೆಯಿತು. ತುಂಬಿದ ಮನೆ ಮತ್ತೆ ಕುಣಿದಾಡಿತು. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಮೀರ್ - ಆಯಿಶಾ ಜೋಡಿಗೆ ಎಲ್ಲರೂ ಶುಭ ಹಾರೈಸಿದರು.
"ಯಾ ಅಲ್ಲಾಹ್! ಇವರ ದಾಂಪತ್ಯ ಬದುಕು ಕೋಪ, ಮತ್ಸರ, ಅಸೂಯೆಗಳಿಂದ ಮುಕ್ತವಾಗಿರಲಿ, ಹರಿದಾಡುವ ನೀರಿನಂತೆ ಶುಭ್ರವಾಗಿರಲಿ" ಎಂದು ಬೇಡುತ್ತಿದ್ದರು ಹಿರಿಯರು.

ಅಮೀರ್ - ಆಯಿಶಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದರು.
"ನಿಮ್ಮ ಕಾಲಿಗೇನಾಯಿತು?" ಆಯಿಶಾ ಪ್ರಶ್ನಿಸಿದಳು.

ಅದುವರೆಗೆ ಈ ಪ್ರಶ್ನೆಯನ್ನು ಕೇಳಿ ಎಲ್ಲರೂ ಸೋತಿದ್ದರು. ಅಮೀರ್ ಆ ರಹಸ್ಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ತನ್ನನ್ನು ತನ್ನ ಕುಂಟುತನವನ್ನು ಒಪ್ಪಿಕೊಂಡು ಬಂದಿರುವ ಆಯಿಶಾಳಿಗೆ ರಹಸ್ಯವನ್ನು ಹೇಳಲೇಬೇಕೆನಿಸಿತು.

"ಅಂದು ನಾನು ಎಂದಿನಂತೆ ವೃತ್ತಿ ಮುಗಿಸಿ ಶಾಲೆಯಿಂದ ಮರಳುತ್ತಿದ್ದಾಗ ರೈಲು ಹಳಿಯಲ್ಲಿ ಇಬ್ಬರು ಯುವತಿಯರು ನಡೆದುಕೊಂಡು ಹೋಗುತ್ತಿದ್ದರು. ಹತ್ತಿರದಲ್ಲೇ ರೈಲು ಬರುತ್ತಿದ್ದರೂ ಅವರಿಗೆ ಅದು ಗೊತ್ತೇ ಆಗಲಿಲ್ಲ. ಅವರು ನಡೆದುಕೊಂಡು ಹೋಗುತ್ತಿದ್ದ ಹಳಿಯಲ್ಲೇ ಆ ರೈಲು ಬರುತ್ತಿತ್ತು. ನಾನು ಒಂದೇ ಸಮನೆ ಓಡಿ ಹೋಗಿ ಅವರನ್ನು ಬದಿಗೆ ಸರಿಸಿದೆ. ಎಚ್ಚೆತ್ತು ನೋಡುವುದರಲ್ಲಿ ನಾನು ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದೆ. ನನ್ನ ಒಂದು ಕಾಲು ರೈಲಿನಡಿಗೆ ಸಿಲುಕಿ ಕಳೆದುಕೊಂಡ ವಿಚಾರ ಗೊತ್ತಾಯಿತು. ಆ ಹುಡುಗಿಯರು ಅಪಾಯದಿಂದ ಪಾರಾಗಿದ್ದರು ಎಂಬ ವಿಚಾರ ತಿಳಿದು ನಾನು ನನ್ನ ನೋವನ್ನೇ ಮರೆತುಬಿಟ್ಟೆ" ಎನ್ನುತ್ತಿರುವಾಗ,
ಆಯಿಶಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

ಅಮೀರ್ ಆಕೆಯ ಅಳುವನ್ನು ನೋಡಿ ಆಶ್ಚರ್ಯಚಕಿತನಾದ.
"ನೀನು ಯಾಕೆ ಅಳುತ್ತಿರುವೆ?" ಎಂದು ಪ್ರಶ್ನಿಸಿದ.
"ನೀವು ರಕ್ಷಿಸಿದ ಹೆಣ್ಣು ಬೇರಾರೂ ಅಲ್ಲ, ನಾನೇ" ಎಂದಾಗ ಅಮೀರ್ ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಮೀರ್ ನಿಗೆ ಕಳೆದುಕೊಂಡ ಕಾಲು ಮತ್ತೆ ದೊರೆತಂತಾಯಿತು.



*** ಸಂಗ್ರಹ ***

Saturday, November 27, 2010

"ಈ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಹೇಗೆ ಬಂದಿತು ? ಅದರ ಕಥೆ  ಇಲ್ಲಿದೆ"



                    ಇಪ್ಪತ್ತು ವರ್ಷಗಳ ಹಿಂದೆ, 1973ರಲ್ಲಿ, ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. ರಾಜ್ಯ ಆದನಂತರ ಇದಕ್ಕೋಸುಗ ಕನ್ನಡನಾಡಿನ ಜನರು 17 ವರ್ಷಗಳವರೆಗೆ  ಕಾಯಬೇಕಾಯಿತು.

             ಕರ್ನಾಟಕಕ್ಕೆ ಯಾವುದು ಬಂದರೂ ತಡವಾಗಿಯೇ ಬಂದಿದೆ. ಕನ್ನಡ ಪ್ರದೇಶಗಳು ಏಕೀಕರಣಗೊಂಡು ಒಂದು ರಾಜ್ಯ ಆಗಬೇಕಾದರೆ  ತುಂಬ ತಡವಾಗಿ ಆಯಿತು. ಕನ್ನಡ ಜನರ ಕನಸು ಆಂಧ್ರರಿಗಿಂತ  ಹಳೆಯದಾಗಿದ್ದರೂ,   ಕರ್ನಾಟಕವು ಆಂಧ್ರ ಆದ ನಂತರವೇ ಆಯಿತು.


                   ರಾಜ್ಯವೇನೋ ಆಯಿತು, ಆದರೆ, ಆಗಬೇಕಾದಾಗ ಆಗಲಿಲ್ಲ. ಆಗಬೇಕಾದಂತೆಯೂ ಆಗಲಿಲ್ಲ.

                  ಭಾರತ ಸರಕಾರವು ನೇಮಕ ಮಾಡಿದ ರಾಜ್ಯ ಪುನಃರ್ಘಟನಾ ಆಯೋಗವು , ತನ್ನ  ವರದಿಯಲ್ಲಿ ತಾನು ಶಿಫಾರಸ್ಸು ಮಾಡಿದ ನೂತನ ರಾಜ್ಯಕ್ಕ ಕರ್ನಾಟಕವೆಂಬ  ಹೆಸರನ್ನು ಕೊಟ್ಟಿದ್ದರೂ, ಮೈಸೂರಿನ ಕರ್ಮಠರ ಒತ್ತಾಯಕ್ಕೆ ಮಣಿದು, ಕನ್ನಡನಾಡಿನ  ಆರಾಧಕರು ಅದನ್ನು ಮೈಸೂರು ಎಂದು ಒಪ್ಪಿಕೊಳ್ಳಬೇಕಾಯಿತು.

                   ಆ ಪ್ರಸಂಗವು ಸೋಲೋಮನ್ ನ ಒಂದು ಕಥೆಯನ್ನು ನೆನಪಿಗೆ ತಂದುಕೊಡುತ್ತದೆ. ಇಬ್ಬರು ತಾಯಂದಿರು ಒಂದು ಮಗುವಿಗೊಸುಗ  ಅದು ನನ್ನದು ತನ್ನದು ಎಂದು ಜಗಳವಾಡುತ್ತಿದ್ದರು.
                    ಅವರ ವ್ಯಾಜ್ಯ, ಪರಿಹಾರಕ್ಕೋಸುಗ, ದೊರೆ ಸೊಲೊಮನ್ ನವರೆಗೆ ಹೋಯಿತು. ಅವರಿಬ್ರಲ್ಲಿ ಆ ಕೂಸಿನ ನಿಜವಾದ ತಾಯಿ ಯಾರು ? ತಾಯಿಯ ಸೋಗು ಹಾಕಿ ತನ್ನ ಹಕ್ಕುದಾರಿಕೆ ಮುಂದೆ ಮಾಡಿದವರು ಯಾರು?
                   ಸೊಲೊಮನ್ ನು ಒಂದು ಉಪಾಯ ಯೋಚಿಸಿ, ಆ ಮಗುವನ್ನು  ತುಂದು ಮಾಡಿ ಒಬ್ಬಳಿಗೆ ಒಂದು ಭಾಗ, ಇನ್ನೊಬ್ಬಳಿಗೆ  ಒಂದು ಭಾಗ  ಕೊಡುವುದಾಗಿ ತೀರ್ಮಾನಿಸಿದ.










                     ಈ ತೀರ್ಮಾನವನ್ನು  ಕೇಳಿ, ತಾಯಿಯ ಸೋಗು ಹಾಕಿದವಳು ಸುಮ್ಮನಿದ್ದಳು. ಆದರೆ ನಿಜವಾದ ತಾಯಿಯಾದವಳ ಕರುಳು ಕೊರೆಯಿತು. ಮಗುವನ್ನು ತುಂಡು ಮಾಡುವ ವಿಚಾರ ಕೇಳಿದ ಅವಳು "ಬೇಡ, ಆ ಮಗುವನ್ನು ಅವಳಿಗೆ ಕೊಟ್ಟು ಬಿಡಿ" ಎಂದು ಹೇಳಿದಳು.

                    ಹೇಗಾದರೂ ಕರ್ನಾಟಕ ರಾಜ್ಯ ಆಗಬೇಕೆಂದು ಕನವರಿಸುತ್ತಿದ್ದ ಜನರು, ಮೈಸೂರು ಹೆಸರನ್ನು ಒಪ್ಪಿಕೊಂಡು, ನಾಡು, ಏಕೀಕರಣಗೊಳ್ಳಲೆಂದು ಅಪೇಕ್ಷಿಸಿದರು.

                   ಆನಂತರ ಅನೇಕ ಸಲ ವಿಧಾನಸಭೆಯಲ್ಲಿ ಕರ್ನಾಟಕದ ಹೆಸರಿನ ಪ್ರಸ್ತಾಪ ಬಂದು, ಮೈಸೂರು ವಾದಿಗಳ ಹಟದಿಂದ,  ಅದು ಹಿಂದೆ ಸರಿಯಿತು. ದೊಡ್ಡಮೇಟಿ ಅಂದಾನಪ್ಪನವರಂತೂ ಕರ್ನಾಟಕ ಹೆಸರಿನ ಬಗೆಗೆ ಹೊಟ್ಟೆಬೇನೆಯನ್ನೇ ಹಚ್ಚಿಕೊಂಡಿದ್ದರು. ಅವರು ಕರ್ನಾಟಕ, ಕನಾಟಕ ಎಂದು ಕನವರಿಸುತ್ತಲೇ ಕಣ್ಣು  ಮುಚ್ಚಿದರು.

                  ರಾಜ್ಯಕ್ಕೆ ಕರ್ನಾ ಟಕ ಎಂಬ ಹೆಸರು ಹೇಗೆ ಬಂದಿತು ಎನ್ನುವುದು ಜನರಿಗೆ ತಿಳಯುವುದು ಅಗತ್ಯವಿದೆ. ಕರ್ನಾಟಕದ  ಹೆಸರು ದೇವರಾಜ ಅರಸರು ತಂದರೆನ್ನುವ ಕಿರೀಟವನ್ನು  ಆಗಿನ ಮುಖ್ಯಮಮತ್ರಿ ದೇವರಾಜ ಅರಸರ ತಲೆಯ ಮೇಲೆ ಇರಿಸಲಾಗಿದೆ. ಅವರು ಕರ್ನಾಟಕ ಹೆಸರಿನ ಬಗೆಗೆ ವಿರೋಧವಾಗಿದ್ದರೂ, ರಾಜ್ಯಕ್ಕೆ ಹೆಸರು ತಂದ  ಬಹುಮಾನವನ್ನು ಅವರು ಪಡೆದುಕೊಂಡರು.

                  ದೇವರಾಜ ಅರಸರು ಕರ್ನಾಟಕ  ಎಂಬ ಹೆಸರನ್ನು ಸದನದ ಒಳಗೆ ಮತ್ತು ಹೊರಗೆ,  ಎರಡೂ  ಕಡೆಗಳಲ್ಲಿ ವಿರೋಧಿಸಿದ್ದರು. ಕರ್ನಾಟಕ ಆಗುವಾಗ ಮತ್ತು ಆ ಮೇಲೆ,  ಅವರು ಈ ಹೆಸರನ್ನು ನಖಶಿಖಾಂತವಾಗಿ ಎದುರುಸಿದ್ದರು. ಮೈಸೂರು ಹೆಸರನ್ನು ಬಿಟ್ಟುಕೊಡಲು ಅವರು ಸುತರಾಂ ಸಿದ್ಧರಿರಲಿಲ್ಲ.

                    1972ರಲ್ಲಿ ಹೊಸ ಚುನಾವಣೆಗಳು ನಡೆದ ದೇವರಾಜ ಅರಸರು  ಮುಖ್ಯಮಂತ್ರಿಯಾದರು. ಆಗಲೂ   ಅವರು ಕರ್ನಾಟಕ ಹೆಸರಿನ ಬಗೆಗೆ  ಅನುಕೂಲ ಭಾವನೆ ಹೊಂದಿರಲೇ ಇಲ್ಲ. ಪ್ರತಿರೋಧ ಭಾವನೆ ಇರಿಸಿಕೊದರು.
                    ಕರ್ನಾಟಕ ಹೆಸರಿನ ಬಗೆಗೆ ಆಗ ಬಹು ನಿಖರದ ಹೋರಾಟ ಹೂಡಿದವರೆಂದರೆ,  ಹಾಸನದ ಶಾಸಕರದ ಕೆ.ಎಂ.ರುದ್ರಪ್ಪನವರು. ಅವರು ಹಿಂದಿನಿಂದಲೂ ಕರ್ನಾಟಕ ಏಕೀಕರಣವಾದಿಗಳು. 

                  1948ರಲ್ಲಿ  ದಾವಣಗೆರೆಯಲ್ಲಿ  ನಡೆದಿದ್ದ ಕರ್ನಾಟಕ ಯುವಕ ಪರಿಷತ್ತಿಗೆ  ಅವರು  ಅಧ್ಯಕ್ಷರಾಗಿದ್ದರು.

                   ಕರ್ನಾಟಕ ಏಕೀಕರಣದ ಬಗೆಗೆ ಒತ್ತಾಯ ಪಡಿಸುದೇ ಆ ಯುವಕ ಪರಿಷತ್ತಿನ ಉದ್ದೇಶವಾಗಿದ್ದಿತು.

                  ಈ ಕರ್ನಾಟಕ ರಾಜ್ಯವು ಮೈಸೂರು ಎಂಬ ಹೆಸರನು ಪಡೆದು  ಅಸ್ತಿತ್ವಕ್ಕೆ ಬರಬೇಕೆನ್ನುವುದು ಆಗ ಯಾರೊಬ್ಬರ ಕನಸು ಮನಸ್ಸಿನಲ್ಲಿಯೂ  ಇರಲಿಲ್ಲ.

                    ಶಾಸಕ ರುದ್ರಪ್ಪನವರು ರಾಜ್ಯದ ಹೆಸರನ್ನು ಮೈಸೂರಿಗೆ ಬದಲಾಗಿ  ಕನಾಟಕ ಮಾಡಬೇಕೆಂದು ಮುಖ್ಯಮಂತ್ರಿ ದೇವರಾಜ ಅರಸರೆದುರು ಪ್ರಸ್ತಾಪಿಸಿದರು.

                  ಆದರೆ,ಅವರು ಆ ವಿಚಾರವನ್ನು, ಸಹಾನುಭೂತಿಯಿಂದ ಕಾಣಲಿಲ್ಲ.   'ನಿಮಗೆಲ್ಲೋ ಹುಚ್ಚು' ಎನ್ನುವ ಧಾಟಿಯಲ್ಲಿ ಅವರು ಮಾತನಾಡಿದರು.

                 ಮೈಸೂರು ಎಂಬ ಹೆಸರನ್ನು ಒಪ್ಪಿಕೊಂಡ ಕಾರಣದಿಂಲೇ  ಕನ್ನಡ  ನಾಡಿನ ಪ್ರದೇಶಗಳು ಒಂದಾಗುವುದು ಸಾಧ್ಯವಾಯಿತು. ಇಲ್ಲದಿದ್ರೆ ಮೈಸೂರು ಈ ರಾಜ್ಯ ಪುನಃರ್ಘಟನೆಗೆ ಒಪ್ಪುತ್ತಲೇ  ಇರಲಿಲ್ಲವೆಂದು   ದೇವರಾಜ ಅರಸರು ರುದ್ರಪ್ಪನವರನ್ನು ಅವರ  ಪ್ರಯತ್ನದಿಂದ ತಡೆಯಲು ಯತ್ನಿಸಿದರು.

                ಆದರೆ, ರುದ್ರಪ್ಪನವರು ಗೆಲಿಲಿಯೋ ಮಾದರಿಯವರು. ಭೂಮಿಯು ಸೂರ್ಯನ ಸುತ್ತಲೂ ಚಲಿಸುವುದೆಂದು, ಗೆಲಿಲಿಯೋ  ತನ್ನ  ನಿಲುವಿಗೆ ಗಟ್ಟಿಯಾಗಿ  ಅಂಟಿಕೊಂಡು  ನಿಂತಂತೆ, ಅವರು ರಾಜ್ಯಕ್ಕೆ ಕರ್ನಾಟಕ ಎಂಬ ನೈಜ ಹೆಸರೇ ಇರಬೇಕೆನ್ನುವ ತಮ್ಮ ನಿಲುವಿಗೆ ಭದ್ರವಾಗಿ ಅಂಟಿಕೊಂಡು ನಿಂತರು.
                  ಅವರು ಸಮಾ ಅಭಿಪ್ರಾಯದ ಶಸಕರ ಮೇಳವನ್ನು ಕಟ್ಟಿಕೊಂಡು ಹೋಗಿ ಅರಸರ  ಮೇಲೆ ಒತ್ತಡ  ತಂದರು. ಕರ್ನಾಟಕ ಹೆಸರಿನ ಬಗೆಗೆ ಸಹಮತವುಳ್ಳ ಸದಸ್ಯರು ಉತ್ತರ  ಕರ್ನಾಟಕದಲ್ಲಿ ಇದ್ದಂತೆ, ಮೈಸೂರು ಪ್ರದೇಶದಲ್ಲಿಯೂ  ಇದ್ದರು.

               ತಮ್ಮ ಮೇಲೆ ಒತ್ತಡ ಹೆಚ್ಚದಂತೆ,  ದೇವರಾಜ ಅರಸರು ಕುಶಲ ರಾಜಕಾರಣಿಯ  ಪಾತ್ರ ಆಡಬೇಕೆಂದರು.  ರಾಜಕೀಯದಲ್ಲಿ  ಆದರ್ಶವೇನೂ ಇಲ್ಲ,  ಅದು  ಯಾವುದು ಸಾಧ್ಯವೋ ಅದನ್ನು ಸಾಧಿಸುವ ಕಲೆ ಎನ್ನುವುದನ್ನು ಅವರು ಬಲ್ಲರು.
                 ಹೆಚ್ಚು ಜನ ಸದಸ್ಯರಿಗೆ ಬೇಕಾದರೆ ತಾನೇಕೆ ಅದನ್ನು ಬೇಡ  ಎನ್ನಬೇಕು ಎಂದು  ಅವರು ತಮ್ಮೊಳಗೇ ತರ್ಕಿಸಿದರು. ಆದರೂ, ಅವರ ಮನಸ್ಸಿನಲ್ಲಿ ಈ ರಾಜ್ಯದ  ಹೆಸರು  ಮೈಸೂರೆಂದೇ ಇರಬೇಕೆಂದು ಇದ್ದಿತು.

                ಬಹಳಷ್ಟು ಬಲವಂತ ಬಂದ ಮೇಲೆ ಅವರು ಒಂದು ದಿನ ರುದ್ರಪ್ಪನವರಿಗೆ ಹೇಳಿದರು.'ಆಗಲಿ' ನಿಮ್ಮ ಮಾತಿನಂತೆಯೇ ಆಗಲಿ, ಹೆಚ್ಚು ಜನ ಶಾಸಕರು ಕರ್ನಟಕ ಎಂಬ ಹೆಸರಿನ ಪರವಾಗಿ ಇದ್ದರೆ ನನ್ನ ಅಭ್ಯಂತರವೇನೂ ಇಲ್ಲ'  ಎಂದು ಅವರು ಹೇಳಿದ ತಕ್ಷಣವೇ ರುದ್ರಪ್ಪನವರು  ಹಿಗ್ಗಿ ಹೀರೇಕಾಯಿ ಆದರು.

             "ಆದರೆ, ಈ ಹೆಸರಿನ ಬಗೆಗೆ ಪರಮಾವಧೀ ಒಮ್ಮತ  ಬೇಕು. ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಮೂರನೆಯ ಎರಡು ಭಾಗದಷ್ಟು ಸದಸ್ಯರ ಒಪ್ಪಿಗೆಯಾದರು ಬೇಕು" ಎಂದು ಅರಸರು ಅವರಿಗೆ ಹೇಳಿದರು.
ಈ ಕರಾರು ಹಾಕುವಾಗ, ಕರ್ನಾಟಕ ಹೆಸರಿನ ಬಗೆಗೆ ಅಷ್ಟು  ಬಹುಮತ ಬರಲಾರದೆನ್ನುವ ಭರವಸೆ ಅರಸರಿಗೆ ಇದ್ದು. ಅಕ್ಕಿ ಇದ್ದಂತೆಯೂ ಇರಬೇಕು. ನೆಂಟರು ಸತುಂಷ್ಟರೂ ಆಗಬೇಕು ಎನ್ನುವ  ಅಪೇಕ್ಷೆ ಅವರಿಗೆ ಇದ್ದಿತು.

             ಹೆಸರಿನ ಬಗೆಗೆ ಅರಸರಿಂದ ಒಪ್ಪಿಗೆ ಪಡೆದ ಮೇಲೆ ಕೆ.ಎಂ. ರುದ್ರಪ್ಪನವರು ತಮ್ಮ ಪ್ರಚಾರ ಆಂದ ಆರಂಭಿಸಿದರು. ಆಗ ರಾಮಕೃಷ್ಣ ಹೆಗ್ಗಡೆಯವರು ವಿರೋಧ ಪಕ್ಷದ ನಾಯಕರಾಗಿ ವಿಧಾನ ಪರಿಷತ್ತಿನಲ್ಲಿ ಇದ್ದರು. ಪರಮಾವಧಿ ಬೆಂಬಲ  ಪಡೆಯಲು ಅವರು ಹೆಗ್ಗಡೆಯವರ  ಬೆಂಬಲ ಕೋರಿದರು.
        










          ಸಂಸ್ಥಾ ಕಾಂಗ್ರೆಸ್ಸಿನ ಸದಸ್ಯರ ಬೆಂಬಲವನ್ನಲ್ಲದೆ, ತಾವು ಯಾರಿಗೆ ಹೇಳುವುದು ಸಾಧ್ಯವೋ ಅವರೆಲ್ಲರಿಗೂ ತಾವು ಹೇಳುವುದಾಗಿ ಹೆಗ್ಗಡೆಯವರು  ಮಾತು ಕೊಟ್ಟರು.  

                ರುದ್ರಪ್ಪನವರ ಪ್ರಯತ್ನದಲ್ಲಿ ಆಗ ಬಹು ದೊಡ್ಡ ಧೈರ್ಯ  ಕಾಣಿಸಿಕೊಂಡಿತು. ಅವರು ಎಲ್ಲ ಸದಸ್ಯರನ್ನು ಕಂಡು, ಕರ್ನಾಟಕ ಹೆಸರಿನ ಮಹತ್ವವನ್ನು ಅವರ ಮನಸ್ಸಿನ ಮೇಲೆ ಬಿಂಬಿಸಿದರು.
                 ಹೆಸರಿನ ಪ್ರಸ್ತಾಪ ವಿಧಾನಸಭೆಯಲ್ಲಿ ಬಂದು ಅದರ ಮೇಲೆ  ಮತದಾನ ನಡೆಯಿತು. ಎರಡು ಮೂರಾಂಶ ಮತ ಕರ್ನಾಟಕ ಹೆಸರಿನ ಪರವಾಗಿ ಬಂದ ಮೇಲೆ, ವಿಧಾನ ಪರಿಷತ್ತು ಅದನ್ನೇ ಅನುಸರಿಸಿತು. ಹೆಸರನ್ನು ಒಪ್ಪಿಕೊಳ್ಳಲು ಅರಸರಿಗೆ ಆಗ ಅಭ್ಯಂತರ ಉಳಿಯಲಿಲ್ಲ. ತನಾಗಿಯೇ ಬಂದ ಕಿರಿಟ ಅರಸರ ತಲೆಯನ್ನು  ಅಲಂಕರಿಸಿತು.

                ಕರ್ನಾಟಕ ಎಂಬ ಹೆಸರನ್ನು ತರುವ  ಬಗೆಗೆ ಕೆ.ಎಂ. ರುದ್ರ್ಪಪ್ಪನವರು ಮಾಡಿದ  ಕೆಲಸವನ್ನು ಕನಾಟಕದ ಜನರು ಕೃತಜ್ಞತೆಯಿಂದ ಸ್ಮರಿಸಬೇಕು.




ಸಂಗ್ರಹ :     ಡಾ|| ಪಾಟೀಲ ಪುಟ್ಟಪ್ಪನವರ "ನಮ್ಮ ಚೆಲುವ ಕನ್ನಡ ನಾಡು" ಹೊತ್ತಗೆಯಿಂದ ಆಯ್ಕೆ,      
                     ಉಳ್ಳಾಲ ಪುರಸಭಾ ಗ್ರಂಥಾಲಯ.

Friday, November 12, 2010

***ಸಮುದ್ರ ತಳದ ಕೇಬಲ್ ಗಳು***


ತಂತಿಯ ಮೂಲಕ ಸಂದೇಶ ಕಳಿಸುವ ಟೆಲಿಗ್ರಾಫ್ ಕೇಬಲ್ ಗಳು ತಯಾರಾದದ್ದು 1846ರ ಕಾಲದಲ್ಲಿ. ಇವುಗಳಲ್ಲಿ ಮೋರ್ಸ್ ಭಾಷೆಯಲ್ಲಿ ಕಳುಹಿಸುವ ಸಂದೇಶವೇ ಟೆಲಿಗ್ರಾಫ್. ಭೂ ಖಂಡಗಳ ನಡುವೆ ಕೇಬಲ್ ಗಳನ್ನು ಹಾಕಬೇಕಾಯಿತು.  1850ರಲ್ಲಿ ಇಂಗ್ಲಿಷ್ ಕಾಲುವೆಯ ಕೆಳಗೆ ಮೊತ್ತ ಮೊದಲ ಸಮುದ್ರ ತಡಿಯ ಕೇಬಲ್, ಹಾಸಲಾಯಿತು. ಆದರೆ  ಉಪ್ಪು ನೀರು ಸಮುದ್ರ ಪ್ರವಾಹ ಮತ್ತು ನೀರಿನ ಭಾರೀ ಒತ್ತಡಗಳಿಂದಾಗಿ ಈ ಕೇಬಲ್ ಬೇಗನೆ ಹಾಳಾಯಿತು. ಹಲವಾರು ತಾಂತ್ರಿಕ ಆವಿಷ್ಕಾರಗಳ ಬಳಿಕ  ಸಮುದ್ರದ ಕೆಳಗೆ ಸುರಕ್ಷಿತವಾಗಿ  ಇರಬಲ್ಲ ಕೇಬಲ್ ತಯಾರಾಯಿತು.  ಅಂಟ್ಲಾಂಟಿಕ್ ಸಾಗರದ ಕೆಳಗೆ ಕೇಬಲ್  ಹಾಕಲು ಹಲವಾರು ಪ್ರಯತ್ನಗಳು ನಡೆದವು. ಭಾರೀ ತೂಕದ ಕೇಬಲ್ ಗಳನ್ನು  ಸಮುದ್ರದ ತಳಕ್ಕೆ ಇಳಿಸುತ್ತ ಒಯ್ಯಲು ಬೃಹತ್ ಹಡಗುಗಳ ನಿರ್ಮಾಣವಾಯಿತು. ಕೊನೆಗೂ 1858ರಲ್ಲಿ ಈ ಕೆಲಸ  ಯಶಸ್ವಿಯಾಯಿತು. ಇಂಗ್ಲೆಂಡ್ ನ ಆಗಿನ ರಾಣಿ ವಿಕ್ಟೋರಿಯಾ, ಅಮೆರಿಕಾದ ಅಧ್ಯಕ್ಷ ಬುಚಾನನ್ ಗೆ ಜಗತ್ತಿನ ಮೊತ್ತ ಮೊದಲ  ಸಾಗರಾಂತರ ಟೆಲಿಗ್ರಾಫ್ ಸಂದೇಶ ಕಳಿಸಿದಳು. 99 ಶಬ್ದಗಳ ಈ ಸಂದೇಶ ರವಾನೆಗೊಳ್ಳಲು 18 ಗಂಟೆಗಳೇ ಹಿಡಿದಿದ್ದವು!!!


(ಸಮುದ್ರ ತಳದಲ್ಲಿ ಕೇಬಲ್ ಗಳನ್ನು ಹಾಸಲು ಭಾರೀ ಹಡಗುಗಳ ಸಹಾಯ ಬೇಕು.)

1863ರಲ್ಲಿ  ಮುಂಬಯಿಯಿಂದ ಸೌದಿ ಅರೇಬಿಯಾಗೆ ಸಾಗರತಳದ ಕೇಬಲ್ ಸಂಪರ್ಕ ತಯಾರಾಯಿತು. 1870ರಲ್ಲಿ ನಾಲ್ಕು ಕೇಬಲ್ ಕಂಪೆನಿಗಳು  ಸೇರಿ ಮುಂಬಯಿಯಿಂದ ಲಂಡನ್ ಗೆ  ಕೇಬಲ್ ಹಾಸಿದವು. 20ನೆಯ ಶತಮಾನದಲ್ಲಿ ಟೆಲಿಗ್ರಾಫ್ ಕೇಬಲ್ ಗಳ ಜಾಗದಲ್ಲಿ ಟೆಲಿಫೋನ್ ಕೇಬಲ್ ಗಳನ್ನು ಸಮುದ್ರದ ತಳದಲ್ಲಿ  ಹಾಸಲಾಯಿತು.ಈ ಕೇಬಲ್ ಗಳ ಮೂಲಕ ಶಬ್ದ ತರಂಗಗಳು ಸಾಗಿದವು. ಇಂದು ಸಾಗರತಳದ ಕೇಬಲ್ ಗಳು  ಅಂಟಾರ್ಕ್ಟಿಕಾ  ಬಿಟ್ಟರೆ  ಬೇರೆಲ್ಲ ಭೂಖಂಡಗಳ ನಡುವೆ ಸಂಪರ್ಕ ನಿರ್ಮಿಸಿವೆ.
1980ರ ಬಳಿಕ  ಫೈಬರ್ ಆಪ್ಟಿಕ್ಸ್  ಎಂಬ ವಿಶೇಷ ತಂತಿಗಳ ಬಳಕೆ ಆರಂಭವಾಯಿತು. ಇವುಗಳಲ್ಲಿ ಡಿಜಿಟಲ್ ಮಾಹಿತಿ ಹರಿಯುತ್ತದೆ. ಟೆಲಿಫೋನ್  ಸಂಭಾಷಣೆ ಮಾತ್ರವೇ ಅಲ್ಲ, ಇಂಟರ್ ನೆಟ್ ಮತ್ತು ಖಾಸಾಗಿ ಮಾಹಿತಿಗಳಿಗೂ ಡಿಜಿಟಲ್ ರೂಪದಲ್ಲಿ ಇದರಲ್ಲಿ ಭಾರೀ  ವೇಗದಲ್ಲಿ ಸಾಗುತ್ತವೆ.



1988ರಲ್ಲಿ ಸಾಗರ ತಳದಲ್ಲಿ ಫೈಬರ್ ಆಪ್ಟಿಕ್ಸ್ ಕೇಬಲ್ ಗಳನ್ನು ಬಳಸಲಾಯಿತು. ಇಂದಿನ ಕೆಬಲ್ ಗಳು ಬಳಸಲಾಯಿತು. ಇಂದಿನ ಎಲ್ಲ ಆಧುನಿಕ ಸಂಪರ್ಕ  ತಂತ್ರಜ್ಞಾನದ ಕೇಬಲ್ ಗಳನ್ನು ಬಳಸಲಾಗುತ್ತದೆ. ಹಿಂದಿನ ಕಾಲದ ಕೇಬಲ್ ಗಳು ಸಾಗರ ತಳದಲ್ಲಿ ತುಂಡಾಗುವುದು, ನೀರಿನಿಂದಾಗಿ ಕೆಡುವುದು ಸಾಮಾನ್ಯವೇ  ಆಗಿತ್ತು. ಆಧುನಿಕ ಕೇಬಲ್ ಗಳು ಸುಮಾರು ಏಳು ಸೆಂಟಿಮೀಟರ್ ದಪ್ಪಗೆ  ಇದ್ದು, ಪ್ರತಿಯೊಂದು ಮೀಟರ್ ಕೇಬಲ್ ಹತ್ತು ಕಿಲೋ ಭಾರವಾಗಿರುತ್ತದೆ. ಒಳಗಿನ ಕೇಬಲ್ ಸುತ್ತ ಹಲವಾರು ರಕ್ಷಣಾ  ಹೊದಿಕೆಗಳಿರುತ್ತವೆ.

ಸಾಗರ ತಳದ ಕೇಬಲ್ ನ ಒಳಗೆ ಫೈಬರ್ ಆಪ್ಟಿಕ್ಸ್ ನ ತಂತಿಗಳು ಇರುತ್ತವೆ. ಅದರ ಹೊರಗೆ ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಿಯಲಾಗಿರುತ್ತದೆ. ಇದನ್ನು ಹಿತ್ತಾಳೆಯ ಟ್ಯೂಬ್ ನ ಒಳಗೆ ಹಾಕಿರಲಾಗುತ್ತದೆ. ಇದರ ಹೊರಗೆ ಪಾಲಿ ಕಾರ್ಬೊನೇಟ್ ಹೊದಿಕೆ. ಇದನ್ನು ಜಲನಿರೋಧಕ ಅಲ್ಯುಮಿನಿಯಮ್ ಕವಚದಿಂದ ರಕ್ಷಿಸಲಾಗುತ್ತದೆ. ಈ ಜೋಡಣೆ  ಸಮುದ್ರ ಪ್ರವಾಹಗಳ  ಒತ್ತಡದಲ್ಲಿ  ನಾಶವಾಗದಂತೆ ಉಕ್ಕಿನ ತಂತಿಗಳ ಹೊರಕವಚ ಇದೆ. ಇದನ್ನು ಮೈಲಾರ್ ಟೇಪ್ ನಿಂದ  ಬಿಗಿಯಲಾಗುತ್ತದೆ. ಎಲ್ಲಕ್ಕಿಂತ ಹೊರಗೆ ಪಾಲಿಥೈಲೀನ್ ಹೊದಿಕೆ ಇರುತ್ತದೆ.

ಷ್ಟೆಲ್ಲಾ  ಭದ್ರತೆ ಇದ್ದರೂ ಸಮುದ್ರ ತಳದ ಕೇಬಲ್ ಗಳು ತುಂಡಾಗಬಹುದು. ಮೀನುಗಾರಿಕೆಯ ಹಡಗುಗಳಿಂದ, ಲಂಗರುಗಳಿಂದ, ಸಮುದ್ರತಳದ ಪ್ರಾಕೃತಿಕ ಪ್ರಕೋಪಗಳಿಂದ ಕೆಡಬಹುದು. ಶಾರ್ಕ್ ಮೀನುಗಳು ಅವುಗಳನ್ನು ಕಚ್ಚಿ  ತುಂಡು ಮಾಡಬಹುದು.

2008ರಲ್ಲಿ ಸುಯೆಜ್ ಕಾಲುವೆಯ ಬಳಿ  ಹಡಗುಗಳಿಂದಾಗಿ ಸಾಗರಾಂತರ ಕೇಬಲ್ ಗಳು ಕಡಿದು ಹೋದವು. ಇದರಿಂದ  ಭಾರತ ಮತ್ತು ಕೊಲ್ಲಿ ದೇಶಗಳ ಸಂಪರ್ಕ ವ್ಯವಸ್ಥೆಗಳು ಮತ್ತು ಇಂಟರ್ ನೆಟ್ ಜಾಲ ಅಸ್ತವ್ಯಸ್ತವಾಗಿದ್ದವು.

***********************

Wednesday, November 10, 2010

***ಮಿಡಿತ***

ಬಾನಂಚಲಿ ಹಾರುವ ಹಕ್ಕಿಗಳಂತೆ
ನೀರಲ್ಲಿ ಈಜಾಡುವ ಮೀನಿನಂತೆ
ಹಚ್ಚಹಸುರಲಿ ಹರಡಿರುವ ಪ್ರಕೃತಿಯಂತೆ
ಕಾಶದಲ್ಲಿ ಹಾರಡಿರುವ ತಾರೆಗಳಂತೆ




             ನನ್ನೀ ಮನಸ್ಸು ಮಿಡಿಯುತಿದೆ
             ನಾನು ಹಕ್ಕಿಗಳಂತೆ ಹಾರುವೆ
             ಮೀನಿನಂತೆ ಈಜಾಡುವೆ
             ಹಸುರಾಗಿ ಹರಡುವೆ
             ತಾರೆಗಳಂತೆ ಮಿನುಗುವೆ..............

***ಚಿಲಿಪಿಲಿ***




ಚಿಲಿ ಪಿಲಿ ಎನ್ನುವ ಹಕ್ಕಿಗಳ ಇಂಚರ
ಜುಳು ಜುಳು ಎನ್ನುವ ನದಿಗಳ ಸಂಚಾರ
ಕೇಳಲು ಎಷ್ಟೊಂದು ಕಿವಿಗೆ ಮಧುರ
ಸವಿಯಲು ಇನ್ನಷ್ಟು ಮನಸ್ಸಿಗೆ ಸುಮಧುರ




ಹಚ್ಚ ಹಸುರಾಗಿ ಹರಡಿರುವ ಪೈರುಗಳು
ನೀರಲ್ಲಿ ಈಜಾಡುತ ಬಳುಕುವ ಮೀನುಗಳು
ಆಕಾಶದಿ ಸಾಲಾಗಿ ಹಾರಾಡುವ ಬೆಳ್ಳಕ್ಕಿಗಳು
ಇದ ನೋಡಿ ನಾನಾದೆ ಬಣ್ಣದ ಬಣ್ಣದ ಚಿಟ್ಟೆಗಳು




ಆಹಾ!!! ಏನೊಂದು ಸುಂದರ ಅನುಭವ
ಮರೆಸುವುದು ಮನಸ್ಸಿನ ಎಲ್ಲಾ ನೋವ
ಇವಲ್ಲಿ ಯಾವುದಾದರೊಂದಾಗಿ  ನಾ ಹುಟ್ಟಿದರೆ ಮಾನವ
ಅಲ್ಲೇ ಇರುತ್ತಿತ್ತು ನನ್ನ ಜೀವ.......!!!!!!!!!!

Monday, November 8, 2010

***ಸಮರ್ಥ ಸದ್ಗುರು ಶ್ರೀ ಸಾಯಿ ಪ್ರಭೋಧ ಸುಧೆ***



*** ಓಂ ಶ್ರೀ ಶಿರಡಿ ಸಾಯಿ ರಾಂ ***

" ಹಿಂದುಗಳ ದೇವರಾದ ಶ್ರೀ ರಾಮನು, ಮಹಮ್ಮದೀಯರ  ದೇವನಾದ ರಹೀಮನೂ ಒಬ್ಬನೇ. ಅವರಲ್ಲಿ ಬೇಧವೇನೂ ಇಲ್ಲ"

"ವಿವಾದಗಳಿಗೆ ಇಳಿಯಬೇಡಿ. ಉಭಯ ಮತದವರೂ ಐಕ್ಯಮತ್ಯವಾಗಿ ಬಾಳಿ"

" ಯೋಗ, ತ್ಯಾಗ, ತಪಸ್ಸು ಮತ್ತು ಜ್ಞಾನ - ಇವೇ  ಮೋಕ್ಷ ಪ್ರಾಪ್ತಿಗೆ  ಮಾರ್ಗಗಳು"

" ಮೋಕ್ಷವನ್ನು ಪಡೆದವರ  ಜೀವನ ನಿರರ್ಥಕ"

" ಅಪಕಾರ ಮಾಡಿದವರಿಗೆ ಉಪಕಾರ ಹೊರೆತು ಅಪಕಾರ ಮಾಡಬೇಡ"

"ಧೃಢವಾದ ವಿಶ್ವಾಸ, ತಾಳ್ಮೆ  ಎಂಬ ಎರಡು ಪೈಸೆಗಳನ್ನೇ ಶಿಷ್ಯರಿಂದ ಗುರು ಅಪೇಕ್ಷಿಸುವ  ದಕ್ಷಿಣೆ"

"ಶಿರ್ಡಿಯನ್ನು  ಪ್ರವೇಶಿಸುವ ಕೂಡಲೇ  ಚಿಂತೆಗಳೆಲ್ಲಾ  ನಿವಾರಣೆಯಾಗುವವು"

ದ್ವಾರಕಾಮಾಯಿ ಶ್ರೀ ಸಾಯಿನಾಥರ ನಿವಾಸ ಸ್ಥಳವಾದ ಮಸೀದಿ ಕಾಮಧೇನು. ಅಲ್ಲಿ ಭಕ್ತರ ಕೋರಿಕೆಗಳೆಲ್ಲಾ ಫಲಿಸುತ್ತವೆ"

ನನ್ನ ಭೌತಿಕ ಶರೀರವನ್ನು ನಾನು ತೊರೆದರೂ ಸಹ ಸದಾ ಜಾಗೃತನಾಗಿದ್ದು ನನ್ನ ಭಕ್ತರ ರಕ್ಷಣೆಯ ವಿಷಯದಲ್ಲಿ ಸರ್ವ ಸನ್ನಧನಾಗಿರುತ್ತೇನೆ"

"ಶರಣು  ಹೊಂದಿದವರನ್ನು ರಕ್ಷಸುವುದೇ ನನ್ನ ವೃತವು"

"ನಿಮ್ಮ ಭಾರವನ್ನು ನನ್ನ ಮೇಲೆ ಹಾಕಿ ಬೀಡಿ. ನಾನು ಹೊರುತ್ತೇನೆ"

ಭಗವಂತನೇ ನನ್ನ ಯಜಮಾನ. ಆತನ ಆಜ್ಞೆ ಪ್ರಕಾರವೇ ನಾನು ನಡೆದುಕೊಳ್ಳುತ್ತೇನೆ "

"ನನ್ನ ದೃಷ್ಟಿಯಲ್ಲಿ ಎಲ್ಲರೂ ಸಮಾನರೆ. ನನ್ನ ಆಜ್ಞೆಯಿಲ್ಲದೆ ಒಂದು ಸಣ್ಣ ಎಲೆಯೂ ಅಲುಗಲಾರದು"

" ನಾನು ಯಾರೊಂದಿಗೂ  ಕೋಪಿಸುವುದಿಲ್ಲ. ತನ್ನ ಮಕ್ಕಳ ಮೇಲೆ ತಾಯಿಯು ಕೋಪಗೊಳ್ಳುವಳೇ? ಸಮುದ್ರವು ನಾನಾ ನದಿಗಳಿಗೆ ತನ್ನ  ನೀರನ್ನು ಹಿಂತಿರುಗಿಸುವಳೇ?"

" ತಾಯಿಗೆ ತಕ್ಕ ಮಕ್ಕಳಾಗಿ ಬಾಳೀ. ನಿಮ್ಮ ಭಂಢಾರವನ್ನು ತುಂಬಿಕೊಳ್ಳಿ"

"ಋಣಾನು ಬಂಧ ಕಾರಣ ಒಬ್ಬರನ್ನೊಬ್ಬರು  ಭೇಟಿಯಾಗುವರು. ಆದಕಾರಣ  ಯಾರೇ ಆಗಲಿ  ಅಥವಾ ಯಾವುದೇ ಪ್ರಾಣಿಯಾಗಲಿ ನಿಮ್ಮ ಬಳಿ ಬಂದಾಗ ಓಡಿಸಬೇಡಿ. ಮಾಡಬೇಕಾದ ಉಪಕಾರ ಮಾಇ. ತಿರಸ್ಕರಿಸಬೇಡಿ. ಆಗ ನೀವು ಮಾಡಿದ  ಪರೋಪಕಾರಕ್ಕಾಗಿ ದೇವರು ಸಂತೋಷಿಸುತ್ತಾನೆ"

"ಯಾರಾದರೂ, ಏನಾದರೂ ನಿಮ್ಮನ್ನು ಯಾಚಿಸಿದರೆ ಅವರ ಕೋರಿಕೆಯನ್ನು ನೆರವೇರಿಸಿ. ನಿಮಗೆ ಆ ಶಕ್ತಿಯಿಲ್ಲದಿದ್ದ ಪಕ್ಷ ಬೇರೆಯವರಿಂದ ಕೊಡಿಸಿ. 'ಇಲ್ಲ'ಎಂದು ಹೇಳಬೇಡಿ. ನಿಮ್ಮಲ್ಲಿ ಕೊಡಲು ಏನೂ ಇಲ್ಲವಾದಲ್ಲಿ, ಇತರರೊಂದಿಗೆ ಕೋಪಗೊಳ್ಳದೆ ನಯವಾಗಿಯೇ 'ಇಲ್ಲ'ವೆನ್ನಿ.  'ಅಯ್ಯೋ ನಮಗೆ ಕೊಡಲು ಇಷ್ಟವಿಲ್ಲ' ಎಂದು ಹೇಳಬಹುದೇ ವಿನಾ ಸುಳ್ಳಾಡಬೇಡಿ"

"ಕಾರ್ಯದಲ್ಲಿ ತೊಡಗಿರಿ. ಭಗವನ್ನಾಮವನ್ನು ಸ್ಮರಿಸಿರಿ. ಸದ್ಗ್ರಂಥಗಳನ್ನು ಪಠಿಸಿರಿ. ದ್ವೇಷಗಳನ್ನಾಗಲೀ, ಜಗಳಗನ್ನಾಗಲೀ ನೀವು ವರ್ಜಿಸಿದಲ್ಲಿ ದೇವರು  ನಿಮ್ಮನ್ನು ರಕ್ಷಿಸುವನು"

"ನಾವು ಅದನ್ನು (ಹಾವನ್ನು) ಸಾಯಿಸಬಾರದು. ಏಕೆಂದರೆ ದೇವರು ಅಣತಿ ನೀಡದಿದ್ದಲ್ಲಿ ಅದು ನಮ್ಮನ್ನು ಸಾಯಿಸುವುದಿಲ್ಲ. ಒಂದು ವೇಳೆ ದೇವರೇನಾದರೂ ಹಾಗೆ ಅಣತಿ ಮಾಡಿದಲ್ಲಿ ಅದನ್ನು ತಪ್ಪಿಸಲು ನಮ್ಮಿಂದ ಅಸಾಧ್ಯ"

"ಸತ್ಯ, ವಿಶ್ವಾಸ, ತಾಳ್ಮೆಗಳನ್ನು ಹೊಂದಿರುವವನ  ಬಳಿಯೇ ನಾನು ಸದಾ ಕಾಲವು ಇರುವೆನು"

"ತನ್ನ ಅಹಂಕಾರವನ್ನು ತ್ಯಜಿಸಿ ನನ್ನ ಪಾದಗಳನ್ನು ಅರ್ಚಿಸಿದವರಿಗೆ ನಾನೆಷ್ಟೋ ಸಹಾಯ ಮಾಡುತ್ತೇನೆ"

"ಸುಳ್ಳು ಹೇಳಬೇಡಿ. ದೇವರಲ್ಲಿ ನಂಬಿಕೆ ಇಡಿ" 

"ನೀವೆಲ್ಲಿದ್ದರೂ, ಏನು ಮಾಡುತ್ತಿದ್ದರೂ ನನಗೆ ತಿಳಿಯುತ್ತದೆ ಎಂಬ ಸಂಗತಿಯನ್ನು ಮರೆಯಬೇಡಿ!!! ನಾನು ಎಲ್ಲರ ಹೃದಯಗಳನ್ನು  ಪಾಲಿಸುತ್ತೇನೆ"

" ಹಸಿದವನಿಗೆ ಅನ್ನ, ದಾಹ ಪೀಡಿತರಿಗೆ ನೀರು ದರಿದ್ರರಿಗೆ ವಸ್ತ್ರ, ಬಳಲಿದವರಿಗೆ  ನಿನ್ನ ಜಗಲಿ, ಕೊಡುತ್ತಾ ಬಾ. ಆಗಲೇ ದೇವರು ಸಂತುಷ್ಟನಾಗುವನು"

"ನಾನು ನನ್ನ ಪ್ರಾಣವನ್ನಾದರೂ ಕೊಟ್ಟೇನು. ವಚನಭಂಗ ಮಾಡಲಾರೆ"

"ಪ್ರಾಣಿಗಳ ಶರೀರಗಳು ಭಿನ್ನವಾಗಿರಬಹುದು. ಆದರೆ ಎಲ್ಲರ ಹಸಿವು ಒಂದೇ"

"ನೀವು ನಿದ್ರಿಸುವಾಗಳು ನಾನು ನಿಮ್ಮನ್ನು ಕಾದು ಕೊಂಡಿರುತ್ತೇನೆ"

" ಭೂಮಿಯು ಬೀಜಗಳನ್ನು ಭರಿಸುವುದು. ಮೋಡಗಳು ಮಳೆಯ ಸುರಿಸುವುದು. ಸೂರ್ಯನು ತನ್ನ ಕಾರಣಗಳಿಂದ ಬೀಜ ಮೊಳೆಯುವಂತೆ ಮಾಡುವನು. ಆದರೆ ಆ ಮೂವರಿಗೂ ಬೆಳೆಯ ಮೇಲೆ ಆಸೆಯಿಲ್ಲ.  ಅದೇ ಮಾದರಿ ಮನುಷ್ಯನೂ ಸಹ ನಿಷ್ಕಾಮನಾಗಿ ಲೋಕ ಹಿತವಾದ ಕಾಯಕಗಳನ್ನು ಮಾಡಬೇಕು. ಅವನು ಹೀಗಿರುವಲ್ಲಿ ದುಃಖವಿರುವುದಿಲ್ಲ. ಮುಕ್ತಿಯೆನ್ನುವುದು ದುಃಖದ ನಾಶ ಅಥವಾ ದುಃಖವಿಲ್ಲದಿರುವಿಕೆ."

*** ಓಂ ಶ್ರೀ ಶಿರಡಿ ಸಾಯಿ ರಾಂ ***


ಸಂಗ್ರಹ(ಗ್ರಂಥಾಲಯ)