Friday, November 5, 2010

***ಸಪ್ತಸ್ವರ***



ಸರಿಗಮಪದನಿ ಸಪ್ತಸ್ವರ
ಅರಳಿತು ಮನದಿ   ಇಂಚರ - 2
ಹಾಡಿತು ಕೋಗಿಲೆ ನಲಿಯಿತು ಮಯೂರ
ಸವಿಯುವ ದುಂಬಿಯ ಝೇಂಕಾರ  
ಸವಿಯುವ ದುಂಬಿಯ ಝೇಂಕಾರ         || ಸರಿಗಮ||(ಪಲ್ಲವಿ)


                                
ಮೂಡಣದೀ ಬೆಳಗಿಹ ಸೂರ್ಯ
ಚೆಲ್ಲಿದ ಕಿರಣದಿ ಉರಿಯೋ ಶೌರ್ಯ
ಚಿಲಿಪಿಲಿ ಎನ್ನುತಾ ಹಾಡಿದೆ ಹಕ್ಕಿ
 ಹರಿದಿದೆ ನದಿಯು ಉಕ್ಕಿ ಉಕ್ಕಿ   
 ಹರಿದಿದೆ ನದಿಯು ಉಕ್ಕಿ ಉಕ್ಕಿ           ||ಸರಿಗಮ||(ಚರಣ-1)






ಸಾಲಾಗಿ ಬರುತಿದೆ ಅಲೆಗಳು
ಅಲೆಯ ಮೇಲೆ ತೇಲಿದೆ ಸ್ವರಗಳು
ಸರಿಗಮಪದನಿ ನಿದಪಮಗರಿಸ
ಸೇರಿತು ಸ್ವರವು ಆಲಿಸೆ ಸಂತಸ
ಸೇರಿತು ಸ್ವರವು ಆಲಿಸೆ ಸಂತಸ          ||ಸರಿಗಮ||(ಚರಣ-2)


ಬಾನಾಡಿ ಮೂಡಿದೆ ಮೋಡಾ
ತಂಪಾಗಿ ನೀ ಭೂಮಿಯೊಳ್ ಬೀಳಾ
ಹನಿ ಹನಿ ಇಬ್ಬನಿ ಮುಟ್ಟಲು ಬುವಿಯ
ತುಂಬಿತು ಮಡಿಲು ಭೂಮಿ ತಾಯ
ತುಂಬಿತು ಮಡಿಲು ಭೂಮಿ ತಾಯ         ||ಸರಿಗಮ ||(ಚರಣ-3)







ಸರಿಗಮಪದನಿ ಸಪ್ತಸ್ವರ
ಅರಳಿತು ಮನದಿ   ಇಂಚರ - 2
ಹಾಡಿತು ಕೋಗಿಲೆ ನಲಿಯಿತು ಮಯೂರ
ಸವಿಯುವ ದುಂಬಿಯ ಝೇಂಕಾರ  
    ಸವಿಯುವ ದುಂಬಿಯ ಝೇಂಕಾರ     
******************


***ಜೀವನ***


ಅಂದು ಜೋರಾಗಿ ಬೀಸುವ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆ,  ಗುಡುಗು ಮಿಂಚುಗಳ ನಡುವೆ ಮಗುವಿನ ಆಕ್ರಂದನ , ಜೊತೆಗೆ ಅಳಬೇಡ ಎಂದು ಸಮಧಾನಿಸುತ್ತಿರುವ ತಾಯಿ. ಆ ಮಗುವಿನ ನಿಲ್ಲದ ಅಳು ಏನಕ್ಕೋ ತವಕಿಸುತ್ತಿದೆ. ಅದು ಏನು ಎಂಬುದು ಆ ತಾಯಿಗೆ ತಿಳಿಯುತ್ತಿಲ್ಲ. ಅಳು ನಿಲ್ಲಿಸಲು ತಿಳಿಯದ ತಾಯಿಗೆ , ತನ್ನ ಗಂಡನಿಂದ ಸಹಿಸಲಾರದ ಮಾತುಗಳು.  ಆದರೆ ಅದನ್ನು ತಿಳಿಯದೆ ಸಮಾಧಾನಿಸುತ್ತಿರುವ ಆ ತಾಯಿ ಇನ್ನೂ ತಾಯಿಯ ಪ್ರಜ್ಞೆಯೇ ಇಲ್ಲದೆ ಇರುವ 12 ರ ಹರೆಯದ ಹೆಣ್ಣು.


ಜೋ ಜೋ ಲಾಲಿ ನಾ ಹಾಡುವೆ......ಚಿನ್ನ ನಿನ್ನಾ ಮುದ್ದಾಡುವೆ.......



ಶ್ ಶ್ ಶ್...ಸುಮ್ಮನಿರಿ ಮಗು ಮಲಗಿದೆ.....

ಅಂತೂ ಇಂತೂ  ಕೊನೆಗೆ ಅಳು ನಿಲ್ಲಿಸಿದ ಕಂದ ಮಲಗಿದೆ....ಮಲಗಿದೆ......

ಲಾಲಿ ಹಾಡಿದ್ದು ನಾನೇ ಅಂದು ಕೊಳ್ಳಬೇಡಿ......




ಈ ಮೇಲಿನ ಸಾಲುಗಳನ್ನು ಏಕೆ ಬರೆದೆ ಅಂದ್ರೆ, ಏನೂ ತಿಳಿಯದ ಮಕ್ಕಳಿಗೂ ಬಾಲ್ಯದಲ್ಲೇ ಮದುವೆ ಮಾಡಿ ಮಕ್ಕಳನ್ನು ಹೆರುವ ಯಂತ್ರವನ್ನಾಗಿಸುವ ಅಂದಿಗೇ ಮುಗಿದು ಹೋಗಿಲ್ಲ. ಇಂದೂ ಇದೆ..ಅದು ಹಿರಿಯರ ಸಮ್ಮುಖದಲ್ಲಿ ಮಾತ್ರ ನಡೆಯುವಂತದ್ದಲ್ಲ. ಅವರಾಗಿಯೇ ತೆಗೆದು ಕೊಳ್ಳುವ ನಿರ್ಧಾರಗಳು.



ಹೇಗೆ ಅಂತೀರಾ....ಈಗ ಪ್ರೌಢಶಾಲೆ ಬಿಡಿ ಪ್ರಾಥಮಿಕ ತರಗತಿಯಲ್ಲಿರುವಾಗಲೇ ಪ್ರೀತಿ ಬೆಳೆದು  ಮರವಾಗಿ ಬಿಡುತ್ತದೆ.  ಪ್ರೀತಿ, ಮದುವೆ ಎಂಬುದರ ಅರಿವಿಲ್ಲದೆ ಇರುವ ಈ ಮಕ್ಕಳು ಪ್ರೌಢ, ಕಾಲೇಜು ಜೀವನಕ್ಕೆ ಬರುವಾಗ " ಮನೆಯವರು ಹೇಳೊದನ್ನ ಕೇಳಿದ್ರೆ ಈ ಜನುಮದಲ್ಲಿ ನಾವು ಮದುವೆ ಆಗಲ್ಲ. ಬಾ  ಎಲ್ಲಾದರೂ ದೂರ ಹೋಗೋಣ. ಮುಂದೆ ಏನಾಗುತ್ತೋ ಆಮೇಲೆ  ನೋಡಿದರಾಯಿತು. ಸ್ವಲ್ಪ ದಿನ ಮನೆಯವರು ಬೊಬ್ಬೆ ಹಾಕ್ತಾರೆ ಆಮೇಲೆ ಎಲ್ಲಾ ತಾನಾಗಿಯೇ ಸರಿಹೋಗುತ್ತೆ" ಅಂತ ಹೇಳಿ ಅವರಿಗೆ ಇಷ್ಟ ಬಂದ ಹಾಗೆ  ಮದುವೆ ಮಾಡಿಕೊಂಡು ಜೀವನ ಮಾಡ್ತಾರೆ.  ಅದು ಜೀವನ ಅಲ್ಲ. ಆದರೆ ಅವರ ಪ್ರಕಾರ ಅಷ್ಟಕ್ಕೆ ನಾವು ದೊಡ್ಡವರಾಗಿ ಬಿಟ್ವಿ ಅಂತ.



ಇನ್ನು ಏನಪ್ಪಾ ಅಂದ್ರೆ ಜೀವನದ ಬಗ್ಗೆ  ಕಿಂಚಿತ್ತೂ ಕಾಳಜಿ ಇಲ್ಲದೆ,  ಉಯ್ಯಾಲೆ ಕಟ್ಟಿ ಆಡೋ ಸಮಯದಲ್ಲಿ ಅವ್ರೇ ಒಂದು ಮಗುವಿಗೆ ಉಯ್ಯಾಲೆ  ತಯಾರು ಮಾಡೋವರೆಗೂ ಬೆಳೆದು ಬಿಟ್ಟಿರುತ್ತಾರೆ. ಅಂದರೆ ಆಗಲೇ ಆ ಪುಟ್ಟ ಸಂಸಾರಕ್ಕೆ ಪುಟ್ಟ ಮಗು ಬಂದು  ಅದನ್ನ ಬೆಳೆಸೋಕೂ ಆಗದೆ,  ಅಳೋದನ್ನಾ ನಿಲ್ಲಿಸೋಕೂ ಆಗದೆ ಅವರವರಲ್ಲಿಯೇ ಕಲಹ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲ.  ಕೊನೆಗೆ ಈ ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ. ಎಲ್ಲಾ ನಿನ್ನಿಂದಲೇ ಆಗಿದ್ದು, ಹಾಗ ಹೀಗೆ ಎಂದು ಪರಸ್ಪರರನ್ನೇ ದ್ವೇಷಿಸತೊಡಗುತ್ತಾರೆ........



ಈ ವಿಚಾರಗಳ ಬಳಕೆ ಏಕೆ ಮಾಡಿದೆ ಅಂದರೆ ನನ್ನ  ಕಣ್ಣ ಮುಂದೆಯೇ ಇಂತಹ ಅನೇಕ ಘಟನೆಗಳು ನಡೆದಿರುವುದು ಇದೆ.
ಈಗಲೂ ಜೀವಿಸಲು ಕಷ್ಟಪಡುತ್ತಿರುವುದೂ ಇದೆ.

ಓದೋ ಸಮಯದಲ್ಲಿ ಓದುತ್ತಾ, ದುಡಿಯೋ ಸಮಯದಲ್ಲಿ ದುಡಿಯುತ್ತಾ, ಮದುವೆ ಎಂಬ ಸಮಯದಲ್ಲಿ ಮದುವೆ ಮಾಡಿ ಸುಂದರವಾದ ಜೀವನವನ್ನು ಸಾಗಿಸಬೇಕು.
ಎಲ್ಲದ್ದಕ್ಕಿಂತಲೂ ಮುಂಚಿತಾಗಿ ಜೀವನ ಅಂದ್ರೆ ಏನು ಎಂಬುದರ ಬಗ್ಗೆ ಅರಿವು ಮೂಡಿರಬೇಕು.
(ಪವಿತ್ರವಾದ ಈ ದೇಶದಲ್ಲಿ ಹುಟ್ಟಿದ ನಾವು ಈ ದೇಶಕ್ಕೆ ಏನಾದರೂ ಸಾಧಿಸಿ, ಕೀರ್ತಿಯನ್ನು ನೀಡಬೇಕು. ನೀಡಬೇಕಾದ ಗೌರವ ನೀಡಬೇಕು. )
ಸಾಧಿಸಲು ಬೇಕಾದಷ್ಟು ಸಮಯ ಇರುವಾಗ ಆ ಸಮಯವನ್ನು ವ್ಯರ್ಥಮಾಡಬಾರದು.
ಏನೇ ಆದರೂ ಸ್ವಲ್ಪ ಯೋಚಿಸಿ. ಅಥವಾ ತಿಳಿದವರಲ್ಲಿ ಹೇಳಿ ಸಲಹೆ ಪಡೆಯಿರಿ. ಪ್ರೀತಿ ಕುರುಡು ನಿಜ ಆದರೆ ಅದರಿಂದ ಇಡೀ ಜೀವನವೇ ಕುರುಡಾಗಬಾರದು.

(ಬರೆದ ಬರಹದಲ್ಲಿರುವ ತಪ್ಪು ಒಪ್ಪುಗಳಿಗೆ ಕ್ಷಮೆ ಇರಲಿ)

***ಪೃಥ್ವಿಯ ಮಡಿಲು ತುಂಬಿರಲು***


ನಮಿಸುವೆ ತಾಯಿಗೆ, ನಮಿಸುವೆ ಭೂ ಮಾತೆಗೆ
ಹಚ್ಚಹಸುರಿನ ಮಡಿಲು ತುಂಬಿ ಕಂಗೊಳಿಸೆ,
ಮೈಮರೆತು ನಾನಲ್ಲೆ ಶಿಲೆಯಾದೆ....ನಮಿಸುವೆ  ತಾಯೆ ನಿನಗೆ.




ತಣಿದ ಮೋಡ ಮಳೆಯಾಗಿ
ಬರಡು ಭೂಮಿ ಹಸುರಾಗಿ 
ಸಾಗರವ ಸೇರಿತು ನದಿಯಾಗಿ

ನಾ ಇಲ್ಲಿ ವಿಹಾರಿಯಾಗಲು ಪಕ್ಷಿಯಾಗ ಬಯಸುವೆ,
ನಾ ಇಲ್ಲಿ ನಡೆದಾಡಲು ಕಾಮಧೇನುವಾಗ ಬಯಸುವೆ,
ಪ್ರತಿ ಕ್ಷಣವನ್ನು ಕಳೆಯಲು ಗಾಳಿಯಾಗ ಬಯಸುವೆ,
ಹಚ್ಚಹಸುರಾಗಿ ಆಕರ್ಷಿಸಲು ಹುಲ್ಲಾಗ ಬಯಸುವೆ,
ಇದು ನನ್ನದು , ಇದು ನಾನೇ ಎನ್ನಲು ಭೂಮಿತಾಯಿ ಆಗಲು ಬಯಸುವೆ.........***




ಪ್ರಕೃತಿ ಸೌಂದರ್ಯಕ್ಕಿಂತ ಮಿಗಲಾದ ಸೌಂದರ್ಯ ಏನಿದೆ ಗೆಳೆಯ ???

Thursday, November 4, 2010

***ಸವಿ ನೆನಪು***

ಮರುಕಳಿಸಿದೆ ನಿನ್ನ ನೆನಪು
ಮರೆಯಲಾಗದ ಆ ಸವಿನೆನಪು

ನೀ ಕರೆದಾಗ ನಾ ಬರಲಿಲ್ಲ;
ನಾ ಕರೆಯಲು ಮುಂದಾದಾಗ ನೀನಲ್ಲಿಲ್ಲ.
ನಿನ್ನ ಪ್ರೀತಿಯ ಕೂಗ ನಾತಿಳಿಯಲಿಲ್ಲ;
ಪ್ರೀತಿಯ ಅರಿವು ನನಗಂದು ಇರಲಿಲ್ಲ.

ಮರುಕಳಿಸಿದೆ ನಿನ್ನ ನೆನಪು
ಮರೆಯಲಾಗದ ಆ ಸವಿನೆನಪು
ಮತ್ತೆ ಮತ್ತೆ ನೀ ನನ್ನ ಕಾಡಿದೆ ಬೇಡಿದೆ
"ನನ್ನ ಪ್ರೀತಿಸು" ಎಂದು ,
ಇನ್ನೊಂದು ಭಾರಿ ಕೂಗು "ನನ್ನ ಪ್ರೀತಿಸು" ಎಂದು
ನಾ ಹೇಳುವೆ ನನ್ನ ಇನಿಯ ನೀನೇ ಎಂದು

ಎಲ್ಲಿರುವೆ ನೀ ಎಲ್ಲಿ ಹೋದೆ,
ಏಕೆ ಹೀಗೆ ಮರೆಯಾದೆ
ನಾ ಏನು ಮಾಡಿದೆ ಎಂದು
ನನ್ನಿಂದ ನೀ ದೂರಾದೆ ಇಂದು

ಓ.......ಇನಿಯಾ....................
ಮರುಕಳಿಸಿದೆ ನಿನ್ನ ನೆನಪು
ಮರೆಯಲಾಗದ ಆ ಸವಿನೆನಪು.....
ಆ ....ಸವಿನೆನಪು.......

Tuesday, November 2, 2010

ಪರಿಚಯ

ನಮಸ್ತೆ ನನ್ನ ಎಲ್ಲಾ ಪ್ರಿಯ ಗೆಳೆಯರಿಗೆ,
ಪರಿಚಯ ಅಂದ ಕೂಡಲೇ ....ಒಂದು ಕುತೂಹಲ ಮೂಡುವುದು ಸಹಜ ನಮ್ಮಲ್ಲಿ.. ಯಾರಿವರು? , ಏನಿರಬಹುದು ? ಹೀಗೆ ಹತ್ತು ಹಲವಾರು ಪ್ರಶ್ನೆಗಳು. ಆದ್ರೆ ನನ್ನ ಬಗ್ಗೆ ಹೇಳೋವಂತಹುದು ನನ್ನಲ್ಲಿ ಹಾಗೇನೂ ವಿಶೇಷತೆಗಳು ಇಲ್ಲ. ಯಾಕೆಂದರೆ ನನ್ನ ಬಗ್ಗೆ ನೀವೇ ಹೇಳಬೇಕು. ಆದ್ರೂ ಅದಕ್ಕಿಂತ ಮುಂಚಿತವಾಗಿ, ನಾನುಯಾರು ಅನ್ನೋದನ್ನಾದ್ರೂ ತಿಳಿಸಲೇ ಬೇಕಲ್ವಾ....ನನ್ನ ಹೆಸರು ಸ್ವಪ್ನಾ. ನಾನು ಮೂಲತಃ ಮಂಗಳೂರು ತಾಲೂಕಿನ ಉಳ್ಳಾಲ ಗ್ರಾಮದವಳು. ವಿದ್ಯಾಭ್ಯಾಸ ಎಲ್ಲಾ ಅಲ್ಲೇ. ಅಕ್ಕರೆಯಿಂದ ಕೂಡಿದ ಕುಟುಂಬದಲ್ಲಿ ನಾನು ನನ್ನ ತಾಯಿಗೆ ಮೂರನೇ ಮಗಳು. ಜೀವನದಲ್ಲಿ ಯಾರ ಹಂಗೂ ಇಲ್ಲದೆ ನನ್ನ ಸ್ವ ಸಂಪಾದನೆಯಲ್ಲಿ ನನ್ನ ಜೀವನವನ್ನು ಸಾಗಿಸಿ ನನ್ನ ತಾಯಿಯನ್ನ ಪ್ರೀತಿಯಿಂದ ನೋಡ್ಕೋಬೇಕು. ನನ್ನ ಮೊದಲ ದೇವರೇ ಅಮ್ಮ. ನನ್ನ ಪ್ರತಿ ಹೆಜ್ಜೆಗೂ ಅಮ್ಮನ ಆಶಿರ್ವಾದ, ಪ್ರೋತ್ಸಾಹವೇ ಕಾರಣ.
ಸಂಗೀತ ಅಂದ್ರೆ ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ಸಂಗೀತವನ್ನ ಆಲಿಸೋದು, ಸಮುದ್ರ ತೀರದಲ್ಲಿ ಕೂರುವುದು, ಸುಂದರ ವಾತಾವರಣವನ್ನು ನೋಡುತ್ತಾ ಸವಿಯೋದು, ಕುಣಿಯುವುದು, ಹಾಗೆಯೇ ನನಗೆ ತಿಳಿದ ವಿಷಯವನ್ನು ಇತರರಿಗೆ ತಿಳಿಸುವುದು, ಮನೆಯವರೊಂದಿಗೆ ದೂರ ಪ್ರಯಾಣ, ಇವಲ್ಲಾ ನನಗೆ ತುಂಬಾನೆ ಇಷ್ಟ. ಸ್ನೇಹಿತರು ಸಾಕಷ್ಟು ಇದ್ದರೂ, ನನ್ನ ಬಾಲ್ಯದ ಜೀವನದಲ್ಲಿದ್ದ ಅಂದರೆ ಪ್ರಾಥಮಿಕ ಶಾಲಾ ಜೀವನದಲ್ಲಿ ಇದ್ದ ಗೆಳೆಯರ ನೆನಪು ಇನ್ನೂ ಚಿರವಾಗಿದೆ. ಕೆಲವೊಂದು ಸಾರಿ ಹಿಂದಿ ಕವಯಿತ್ರಿ ಸುಭದ್ರ ಕುಮಾರಿ ಚೌಹಾನ್ ರವರ ಪದ್ಯ ನೆನಪಾಗುತ್ತೆ ...................
ಈಗ್ಲೇ ಜಾಸ್ತಿ ಆಯ್ತು ಅನ್ಸುತ್ತೆ ನನ್ನ ಮಾತು...ಇನ್ನು ಏನಾದ್ರೂ ಕೇಳೋದಿದ್ರೆ ಕೇಳಿ..........

ಸದಾ ಪ್ರೀತಿಯಿಂದ ಶುಭ ಹಾರೈಸೋ.......ಸ್ವಪ್ನಾ.ಎನ್ ಶ್ರೀಯಾನ್.