Saturday, December 18, 2010

***ಹೀಗೊಂದು ಕಥೆ***

ಪ್ರಿಯ ಗೆಳೆಯರೇ,...........

ಕಷ್ಟದ ಕೋಟೆಯೊಳಗೆ ಬಾಲ್ಯವನ್ನು ಸವೆಸಿದ ರಝೂಕ್ ಬೆಳೆದದ್ದು ನರಸಿಂಹಪುರದಲ್ಲಿ. ಹಣದ ಕೊರತೆಯಿಂದ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಊರಿನ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಸುಮಾರು ನಾಲ್ಕು ವರ್ಷ ಕೆಲಸ ಮಾಡಿ ದುಡಿದು ಸಂಗ್ರಹಿಸಿದ ಅಲ್ಪ ಸ್ವಲ್ಪ ಹಣದಲ್ಲಿ ತಾನು ಸ್ವಾವಲಂಬಿಯಾಗಬೇಕೆಂಬ ಉತ್ಕಟ ಅಭಿಲಾಷೆಯಿ೦ದ ರಝಾಕ್ ಸ್ವಂತ ದಿನಸಿ ಅಂಗಡಿಯೊಂದನ್ನು ತೆರೆದು ಹೊಸ ದುಡಿಮೆಯ ಮೂಲಕ ಹೊಸ ಬದುಕನ್ನು ಕಂಡವರು. ಹೆತ್ತವರನ್ನು, ಅಣ್ಣಂದಿರನ್ನು, ತಂಗಿಯಂದಿರನ್ನು ತನ್ನ ಸಂಸಾರದ ಬಂಡಿಯಲ್ಲೇ ಹೊತ್ತೊಯ್ದು ಮಾದರಿ ಜೀವನ ಸಾಗಿಸಿದವರು. ರಝಾಕ್‌ರಿಗೆ ಸುಮಯ್ಯ ಅರ್ಧಾಂಗಿನಿಯಾಗಿ ಸಾಥ್ ನೀಡಿದರು. ತುಂಬಿದ ಮನೆಯಲ್ಲಿ ಅಮೀರ್ ಮತ್ತು ಝಲೈಖಾ ಎಂಬ ಹೆಸರಿನ ಇಬ್ಬರು ಮಕ್ಕಳು ಹುಟ್ಟಿ ಬಂದರು. ಮನೆ ನಂದನವಾಯಿತು. ಮಕ್ಕಳಿಗೆ ಪದೇ ಪದೇ ತಾವು ಬೆಳೆದು ಬಂದ ರೀತಿಯನ್ನು ಹೇಳುತ್ತಾ, ಸ್ವಾವಲಂಬಿಯಾಗಿ ಬಾಳಲು ಪ್ರೇರೇಪಿಸುತ್ತಿದ್ದರು ರಝಾಕ್.

ಒಳ್ಳೆಯ ಪರಿಸರದಲ್ಲೇ ಬೆಳೆದ ಅಮೀರ್, ಕಾಲೇಜು ಶಿಕ್ಷಣ ಮುಗಿಸಿ ಅಧ್ಯಾಪಕ ವೃತ್ತಿಗೆ ಸೇರಿಕೊಂಡ. ಊರಿನಲ್ಲಿ ರಝಾಕ್‌ರ ಕುಟುಂಬಕ್ಕೆ ವಿಶೇಷ ಮರ್ಯಾದೆಯೂ ಇತ್ತು. ಎಲ್ಲರೂ "ಅಮೀರ್ ಸಾರ್" ಎಂದು ಕರೆಯುವಾಗ ರಝಾಕ್ ಸಾಹೇಬರಿಗೆ ಎಲ್ಲಿಲ್ಲದ ಖುಷಿ. ಒಳಗೊಳಗೆ ಮಗನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಇತ್ತು ಝುಲೈಖಾಳಿಗೂ ಒಳ್ಳೆಯ ಸಂಬಂಧ ಕೂಡಿ ಬಂತು. ಝುಲೈಖಾ ಪತಿಯ ಮನೆ ಸೇರಿದಳು. ಇನ್ನು ಅಮೀರ್ ನ ಮದುವೆ ಮಾತ್ರ ಉಳಿದಿರುವುದು.

ಮನೆಯವರೆಲ್ಲರೂ ಅಮೀರ್ ನ ಮದುವೆಯ ಕುರಿತು ಆಲೋಚಿಸುತ್ತಿದ್ದರು. ಅಮೀರ್‌ಗೆ ಪಕ್ಕದ ಊರಿಗೆ ವರ್ಗಾವಣೆಯೂ ಆಯಿತು. ವಾರಕ್ಕೊಮ್ಮೆ ಮನೆಗೆ ಬರಲು ಮಾತ್ರ ಸಾಧ್ಯವಾಗುತ್ತಿತ್ತು. ರಝಾಕ್, ಸುಮಯ್ಯಾರಿಗೆ ಮೊದಲು ಅಮೀರ್ ನನ್ನು ಬಿಟ್ಟಿರಲು ಸಾಧ್ಯವಾಗದಿದ್ದರೂ ವಾರಕ್ಕೊಮ್ಮೆಯಾದರೂ ಮಗನ ಮುಖ ನೋಡಿ ಸಂತೋಷ ಪಡುತ್ತಿದ್ದರು.

ಹೀಗೆ ಒಂದು ದಿನ...........
ಚಿಕನ್ ಸ್ಟಾಲ್‌ನ ಅಬ್ದುಲ್ಲಾ ತನ್ನ ಕಡೆಗೆ ಓಡೋಡಿ ಬರುತ್ತಿರುವುದನ್ನು ಕಂಡು ರಝಾಕ್‌ರಿಗೆ ಗಾಬರಿಯಾಯಿತು. ಏನೂ ಮಾತನಾಡದೆ ಒಂದೇ ಸಮನೆ ಉಸಿರು ಬಿಡುತ್ತಿದ್ದರು. ರಝಾಕ್‌ರಿಗೆ ಏನೆಂದೇ ತೋಚಲಿಲ್ಲ.
"ಬನ್ನಿ ನನ್ನ ಜೊತೆ, ನಿಮ್ಮ ಮಗನಿಗೆ ಏನೂ ಆಗಿಲ್ಲ" ಎಂದು ಒಗೊಟೊಗಟಾಗಿ ಮಾತನಾಡಿದರು.
ರಝಾಕ್‌ರ ಮನದಲ್ಲಿ ಏನೆಲ್ಲಾ ಚಿಂತೆಗಳು ಶುರುವಾದವು.

 ಚಿಕ್ಕ ಮಗುವಿನಂತೆ ಅಬ್ದುಲ್ಲಾರನ್ನೇ ಹಿಂಬಾಲಿಸಿದರು. ಹೀಗೆ ಅಬ್ದುಲ್ಲಾ ಕರೆದುಕೊಂಡು ಹೋದದ್ದು ದೊಡ್ಡದೊಂದು ಆಸ್ಪತ್ರೆಗೆ. ಅಲ್ಲಿ ಶಾಲೆಯ ಮಕ್ಕಳೂ ಇದ್ದಾರೆ, ಕೆಲವು ಮಂದಿ ಅಧ್ಯಾಪಕರೂ ಇದ್ದಾರೆ. ಆದರೆ ಮಗ ಅಮೀರ್ ಕಾಣುತ್ತಿಲ್ಲ.
"ಏನಾಯಿತು ನನ್ನ ಮಗನಿಗೆ? ಏನಾಯಿತು ನನ್ನ ಮಗನಿಗೆ?" ಎಂದು ರಝಾಕ್ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದರು.
"ಏನೂ ಆಗಿಲ್ಲ, ರೈಲು ಹಳಿ ದಾಟುವಾಗ ಅಪಘಾತವಾಗಿ ಕಾಲಿಗೆ ಗಾಯವಾಗಿದೆ ಅಷ್ಟೇ" ಎಂದು ಯಾರೋ ಒಬ್ಬರು ಸಮಾಧಾನಿಸಿದರು.
ಇದನ್ನು ಕೇಳಿ ರಝಾಕ್ ಸಾಹೇಬರು ಮೂರ್ಛೆ ತಪ್ಪಿ ಬಿದ್ದುಬಿಟ್ಟರು.

ಅಮೀರ್‌ನ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಮೀರ್ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದಾನೆ. ಯಾವುದೇ ಗಾಯದ ಗುರುತುಗಳಿಲ್ಲ. ಕಾಲಿಗೆ ಹೊದಿಸಲಾಗಿದ್ದ ಬಟ್ಟೆಯನ್ನು ಸರಿಸಿದರು ಸುಮಯ್ಯಾ.
"ಯಾ ಅಲ್ಲಾಹ್!"
ಮಗನ ಕಾಲನ್ನು ಕತ್ತರಿಸಲಾಗಿತ್ತು. ಒಂದು ಕಾಲನ್ನು ಕಳೆದುಕೊಂಡಿದ್ದರೂ ನಗು ಮುಖ ಬೀರುತ್ತಿದ್ದ ಅಮೀರ್‌ನನ್ನು ಕಂಡು ಹೆತ್ತ ಕರುಳು ಚುರುಗುಟ್ಟಿತು.
ಅಮೀರ್‌ನನ್ನು ಆಂಬುಲೆನ್ಸ್‌ನಲ್ಲೇ ಮನೆಗೆ ಕರೆ ತರಲಾಯಿತು. ಅಪ್ಪ, ಅಮ್ಮ, ಅಣ್ಣಂದಿರು, ತಂಗಿಯಂದಿರು ಅಮೀರ್‌ನಿಗೆ ಸಾಥ್ ನೀಡುತ್ತಿದ್ದಾರೆ. ಅತ್ತಿತ್ತ ಹೋಗಲು ತುಂಬಿದ ಮನೆಯಲ್ಲಿ ಸಾಕಷ್ಟು ಮಂದಿ ಹೆಗಲು ನೀಡುತ್ತಿದ್ದರು. ಅಮೀರ್ ಸಾರ್‌ರನ್ನು ನೋಡಲು ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಬರುತ್ತಿದ್ದರು.
*********************************
ವರ್ಷವೊಂದು ಕಳೆಯಿತು.  ಅಮೀರ್ ಗೆ ಕೃತಕ ಕಾಲಿನ ಆಸರೆ ನೀಡಲಾಯಿತು. ಅಮೀರ್ ಎದ್ದು ಮತ್ತೆ ಚಲಿಸತೊಡಗಿದ. ಹೆತ್ತ ಕರುಳಿಗೆ ಮಗನ ಯಾತನೆ ಅರ್ಥವಾಗುತ್ತಿತ್ತು. ಮದುವೆ ವಿಚಾರ ಮತ್ತೆ ಚರ್ಚೆಯಾಗತೊಡಗಿತು. ಅಮೀರ್  ನಿಗೆ ಚಂದದೊಂದು ಹೆಣ್ಣನ್ನು ನೋಡಿ ಮದುವೆ ಮಾಡಬೇಕು ಎಂದು ಅಜ್ಜ - ಅಜ್ಜಿ ಮಾತನಾಡತೊಡಗಿದರು. ಆದರೇನಂತೆ! ಒಂದು ಕಾಲನ್ನು ಕಳೆದುಕೊಂಡಿರುವ ಅಮೀರ್‌ಗೆ ಯಾರು ಹೆಣ್ಣು ನೀಡುತ್ತಾರೆ? ಎಂದು ಸುಮಯ್ಯಾ ಚಿಂತಿಸತೊಡಗಿದರು.
ಹಲವು ಕಡೆ ಹೆಣ್ಣು ನೋಡಲಾಯಿತು. ಅಮೀರ್ ನ ವೃತ್ತಿ, ಸೌಂದರ್ಯ, ವಿದ್ಯಾಭ್ಯಾಸ ಗೆದ್ದರೂ ಕುಂಟುತನ ಸೋಲುತ್ತಿತ್ತು. ಈ ಹಿಂದೆ ಅಮೀರ್‌ನಿಗೆ ಹೆಣ್ಣು ನೀಡಲು ಮುಂದೆ ಬಂದಿದ್ದವರು ಈಗ ತಲೆಮರೆಸಿಕೊಂಡಿದ್ದರು. ಆ ದೇವ ನನ್ನ ಹಣೆಯಲ್ಲಿ ಏನು ಬರೆದಿದ್ದಾನೋ ಅದೇ ನಡೆಯುತ್ತದೆ ಎಂಬುದಾಗಿತ್ತು ಅಮೀರ್ ನ ಅಚಲ ನಿಲುವು.
ದೂರದಿಂದ ಸಂಬಂಧವೊಂದು ಕೂಡಿ ಬಂತು. ಅದು ಅಮೀರ್ ಶಿಕ್ಷಕನಾಗಿ ವೃತ್ತಿ ಮಾಡುತ್ತಿದ್ದ ಊರಿನಿಂದ ಬಂದ ಸಂಬಂಧವಾಗಿತ್ತು. ಹೆಸರು ಆಯಿಶಾ. ರಹೀಮ್ - ನಸೀಮಾ ದಂಪತಿಯ ಏಕೈಕ ಮಗಳು. ಸೌಂದರ್ಯ, ಶ್ರೀಮಂತಿಕೆ, ಗುಣ ಇವು ಯಾವುದರಲ್ಲೂ ಕೊರತೆಯಿರಲಿಲ್ಲ. ಆದರೆ ಅಮೀರ್ ನನ್ನು ನೋಡಿದ್ದೇ ತಡ, ಆಯಿಶಾ ಒಪ್ಪಿಕೊಂಡಳು, ಮಗಳ ಒಪ್ಪಿಗೆಗೆ ರಹೀಮ್ - ನಸೀಮಾ ತಲೆಯಾಡಿಸಿದರು. ಅಮೀರ್‌ನ ಕುಂಟುತನ ಆಯಿಶಾಳೆದುರು ಪರಿಗಣನೆಗೆ ಬರಲಿಲ್ಲ.
ಆಯಿಶಾಳ ಗೆಳತಿಯರು ಆಗಾಗ ಫೋನು ಮಾಡುತ್ತಿದ್ದರು.
"ಅಮೀರ್‌ನಿಗೆ ಒಂದು ಕಾಲು ಸರಿಯಿಲ್ಲ. ನೀನೇಕೆ ಅವನನ್ನು ಒಪ್ಪಿಕೊಂಡೆ?" ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ಆದರೆ ಆಯಿಶಾ ಏನೂ ಮಾತನಾಡಲಿಲ್ಲ. ಆಕೆಯ ಮೌನವೇ ಉತ್ತರವಾಗಿತ್ತು.
ಗೆಳತಿಯರ ಫೋನು ಅತಿಯಾಗತೊಡಗಿತು. ಆಯಿಶಾಳ ಮೌನವೂ ಮುರಿಯಿತು.
"ನಾನು ಸರಿಯಾದ ತೀರ್ಮಾನವನ್ನೇ ತೆಗೆದುಕೊಂಡಿರುವೆ. ಅಮೀರ್ ಕುಂಟನಾದರೂ, ಕುರುಡನಾದರೂ ನಾನು ಅವರನ್ನೇ ಮದುವೆಯಾಗುವೆ. ಇದು ನನ್ನ ಜೀವನದ ವಿಚಾರ. ಯಾರೂ ಇದರಲ್ಲಿ ಮೂಗು ತೂರಿಸಬೇಡಿ" ಎಂದು ಖಾರವಾಗಿ ಪ್ರತಿಕ್ರಿಯಿಸಿದಳು.

ಅಮೀರ್ - ಆಯಿಶಾಳ ಮದುವೆ ಸಂಭ್ರಮದಿಂದ ನಡೆಯಿತು. ತುಂಬಿದ ಮನೆ ಮತ್ತೆ ಕುಣಿದಾಡಿತು. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಮೀರ್ - ಆಯಿಶಾ ಜೋಡಿಗೆ ಎಲ್ಲರೂ ಶುಭ ಹಾರೈಸಿದರು.
"ಯಾ ಅಲ್ಲಾಹ್! ಇವರ ದಾಂಪತ್ಯ ಬದುಕು ಕೋಪ, ಮತ್ಸರ, ಅಸೂಯೆಗಳಿಂದ ಮುಕ್ತವಾಗಿರಲಿ, ಹರಿದಾಡುವ ನೀರಿನಂತೆ ಶುಭ್ರವಾಗಿರಲಿ" ಎಂದು ಬೇಡುತ್ತಿದ್ದರು ಹಿರಿಯರು.

ಅಮೀರ್ - ಆಯಿಶಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದರು.
"ನಿಮ್ಮ ಕಾಲಿಗೇನಾಯಿತು?" ಆಯಿಶಾ ಪ್ರಶ್ನಿಸಿದಳು.

ಅದುವರೆಗೆ ಈ ಪ್ರಶ್ನೆಯನ್ನು ಕೇಳಿ ಎಲ್ಲರೂ ಸೋತಿದ್ದರು. ಅಮೀರ್ ಆ ರಹಸ್ಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ತನ್ನನ್ನು ತನ್ನ ಕುಂಟುತನವನ್ನು ಒಪ್ಪಿಕೊಂಡು ಬಂದಿರುವ ಆಯಿಶಾಳಿಗೆ ರಹಸ್ಯವನ್ನು ಹೇಳಲೇಬೇಕೆನಿಸಿತು.

"ಅಂದು ನಾನು ಎಂದಿನಂತೆ ವೃತ್ತಿ ಮುಗಿಸಿ ಶಾಲೆಯಿಂದ ಮರಳುತ್ತಿದ್ದಾಗ ರೈಲು ಹಳಿಯಲ್ಲಿ ಇಬ್ಬರು ಯುವತಿಯರು ನಡೆದುಕೊಂಡು ಹೋಗುತ್ತಿದ್ದರು. ಹತ್ತಿರದಲ್ಲೇ ರೈಲು ಬರುತ್ತಿದ್ದರೂ ಅವರಿಗೆ ಅದು ಗೊತ್ತೇ ಆಗಲಿಲ್ಲ. ಅವರು ನಡೆದುಕೊಂಡು ಹೋಗುತ್ತಿದ್ದ ಹಳಿಯಲ್ಲೇ ಆ ರೈಲು ಬರುತ್ತಿತ್ತು. ನಾನು ಒಂದೇ ಸಮನೆ ಓಡಿ ಹೋಗಿ ಅವರನ್ನು ಬದಿಗೆ ಸರಿಸಿದೆ. ಎಚ್ಚೆತ್ತು ನೋಡುವುದರಲ್ಲಿ ನಾನು ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದೆ. ನನ್ನ ಒಂದು ಕಾಲು ರೈಲಿನಡಿಗೆ ಸಿಲುಕಿ ಕಳೆದುಕೊಂಡ ವಿಚಾರ ಗೊತ್ತಾಯಿತು. ಆ ಹುಡುಗಿಯರು ಅಪಾಯದಿಂದ ಪಾರಾಗಿದ್ದರು ಎಂಬ ವಿಚಾರ ತಿಳಿದು ನಾನು ನನ್ನ ನೋವನ್ನೇ ಮರೆತುಬಿಟ್ಟೆ" ಎನ್ನುತ್ತಿರುವಾಗ,
ಆಯಿಶಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

ಅಮೀರ್ ಆಕೆಯ ಅಳುವನ್ನು ನೋಡಿ ಆಶ್ಚರ್ಯಚಕಿತನಾದ.
"ನೀನು ಯಾಕೆ ಅಳುತ್ತಿರುವೆ?" ಎಂದು ಪ್ರಶ್ನಿಸಿದ.
"ನೀವು ರಕ್ಷಿಸಿದ ಹೆಣ್ಣು ಬೇರಾರೂ ಅಲ್ಲ, ನಾನೇ" ಎಂದಾಗ ಅಮೀರ್ ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಮೀರ್ ನಿಗೆ ಕಳೆದುಕೊಂಡ ಕಾಲು ಮತ್ತೆ ದೊರೆತಂತಾಯಿತು.



*** ಸಂಗ್ರಹ ***

No comments:

Post a Comment