Saturday, November 27, 2010

"ಈ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಹೇಗೆ ಬಂದಿತು ? ಅದರ ಕಥೆ  ಇಲ್ಲಿದೆ"



                    ಇಪ್ಪತ್ತು ವರ್ಷಗಳ ಹಿಂದೆ, 1973ರಲ್ಲಿ, ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. ರಾಜ್ಯ ಆದನಂತರ ಇದಕ್ಕೋಸುಗ ಕನ್ನಡನಾಡಿನ ಜನರು 17 ವರ್ಷಗಳವರೆಗೆ  ಕಾಯಬೇಕಾಯಿತು.

             ಕರ್ನಾಟಕಕ್ಕೆ ಯಾವುದು ಬಂದರೂ ತಡವಾಗಿಯೇ ಬಂದಿದೆ. ಕನ್ನಡ ಪ್ರದೇಶಗಳು ಏಕೀಕರಣಗೊಂಡು ಒಂದು ರಾಜ್ಯ ಆಗಬೇಕಾದರೆ  ತುಂಬ ತಡವಾಗಿ ಆಯಿತು. ಕನ್ನಡ ಜನರ ಕನಸು ಆಂಧ್ರರಿಗಿಂತ  ಹಳೆಯದಾಗಿದ್ದರೂ,   ಕರ್ನಾಟಕವು ಆಂಧ್ರ ಆದ ನಂತರವೇ ಆಯಿತು.


                   ರಾಜ್ಯವೇನೋ ಆಯಿತು, ಆದರೆ, ಆಗಬೇಕಾದಾಗ ಆಗಲಿಲ್ಲ. ಆಗಬೇಕಾದಂತೆಯೂ ಆಗಲಿಲ್ಲ.

                  ಭಾರತ ಸರಕಾರವು ನೇಮಕ ಮಾಡಿದ ರಾಜ್ಯ ಪುನಃರ್ಘಟನಾ ಆಯೋಗವು , ತನ್ನ  ವರದಿಯಲ್ಲಿ ತಾನು ಶಿಫಾರಸ್ಸು ಮಾಡಿದ ನೂತನ ರಾಜ್ಯಕ್ಕ ಕರ್ನಾಟಕವೆಂಬ  ಹೆಸರನ್ನು ಕೊಟ್ಟಿದ್ದರೂ, ಮೈಸೂರಿನ ಕರ್ಮಠರ ಒತ್ತಾಯಕ್ಕೆ ಮಣಿದು, ಕನ್ನಡನಾಡಿನ  ಆರಾಧಕರು ಅದನ್ನು ಮೈಸೂರು ಎಂದು ಒಪ್ಪಿಕೊಳ್ಳಬೇಕಾಯಿತು.

                   ಆ ಪ್ರಸಂಗವು ಸೋಲೋಮನ್ ನ ಒಂದು ಕಥೆಯನ್ನು ನೆನಪಿಗೆ ತಂದುಕೊಡುತ್ತದೆ. ಇಬ್ಬರು ತಾಯಂದಿರು ಒಂದು ಮಗುವಿಗೊಸುಗ  ಅದು ನನ್ನದು ತನ್ನದು ಎಂದು ಜಗಳವಾಡುತ್ತಿದ್ದರು.
                    ಅವರ ವ್ಯಾಜ್ಯ, ಪರಿಹಾರಕ್ಕೋಸುಗ, ದೊರೆ ಸೊಲೊಮನ್ ನವರೆಗೆ ಹೋಯಿತು. ಅವರಿಬ್ರಲ್ಲಿ ಆ ಕೂಸಿನ ನಿಜವಾದ ತಾಯಿ ಯಾರು ? ತಾಯಿಯ ಸೋಗು ಹಾಕಿ ತನ್ನ ಹಕ್ಕುದಾರಿಕೆ ಮುಂದೆ ಮಾಡಿದವರು ಯಾರು?
                   ಸೊಲೊಮನ್ ನು ಒಂದು ಉಪಾಯ ಯೋಚಿಸಿ, ಆ ಮಗುವನ್ನು  ತುಂದು ಮಾಡಿ ಒಬ್ಬಳಿಗೆ ಒಂದು ಭಾಗ, ಇನ್ನೊಬ್ಬಳಿಗೆ  ಒಂದು ಭಾಗ  ಕೊಡುವುದಾಗಿ ತೀರ್ಮಾನಿಸಿದ.










                     ಈ ತೀರ್ಮಾನವನ್ನು  ಕೇಳಿ, ತಾಯಿಯ ಸೋಗು ಹಾಕಿದವಳು ಸುಮ್ಮನಿದ್ದಳು. ಆದರೆ ನಿಜವಾದ ತಾಯಿಯಾದವಳ ಕರುಳು ಕೊರೆಯಿತು. ಮಗುವನ್ನು ತುಂಡು ಮಾಡುವ ವಿಚಾರ ಕೇಳಿದ ಅವಳು "ಬೇಡ, ಆ ಮಗುವನ್ನು ಅವಳಿಗೆ ಕೊಟ್ಟು ಬಿಡಿ" ಎಂದು ಹೇಳಿದಳು.

                    ಹೇಗಾದರೂ ಕರ್ನಾಟಕ ರಾಜ್ಯ ಆಗಬೇಕೆಂದು ಕನವರಿಸುತ್ತಿದ್ದ ಜನರು, ಮೈಸೂರು ಹೆಸರನ್ನು ಒಪ್ಪಿಕೊಂಡು, ನಾಡು, ಏಕೀಕರಣಗೊಳ್ಳಲೆಂದು ಅಪೇಕ್ಷಿಸಿದರು.

                   ಆನಂತರ ಅನೇಕ ಸಲ ವಿಧಾನಸಭೆಯಲ್ಲಿ ಕರ್ನಾಟಕದ ಹೆಸರಿನ ಪ್ರಸ್ತಾಪ ಬಂದು, ಮೈಸೂರು ವಾದಿಗಳ ಹಟದಿಂದ,  ಅದು ಹಿಂದೆ ಸರಿಯಿತು. ದೊಡ್ಡಮೇಟಿ ಅಂದಾನಪ್ಪನವರಂತೂ ಕರ್ನಾಟಕ ಹೆಸರಿನ ಬಗೆಗೆ ಹೊಟ್ಟೆಬೇನೆಯನ್ನೇ ಹಚ್ಚಿಕೊಂಡಿದ್ದರು. ಅವರು ಕರ್ನಾಟಕ, ಕನಾಟಕ ಎಂದು ಕನವರಿಸುತ್ತಲೇ ಕಣ್ಣು  ಮುಚ್ಚಿದರು.

                  ರಾಜ್ಯಕ್ಕೆ ಕರ್ನಾ ಟಕ ಎಂಬ ಹೆಸರು ಹೇಗೆ ಬಂದಿತು ಎನ್ನುವುದು ಜನರಿಗೆ ತಿಳಯುವುದು ಅಗತ್ಯವಿದೆ. ಕರ್ನಾಟಕದ  ಹೆಸರು ದೇವರಾಜ ಅರಸರು ತಂದರೆನ್ನುವ ಕಿರೀಟವನ್ನು  ಆಗಿನ ಮುಖ್ಯಮಮತ್ರಿ ದೇವರಾಜ ಅರಸರ ತಲೆಯ ಮೇಲೆ ಇರಿಸಲಾಗಿದೆ. ಅವರು ಕರ್ನಾಟಕ ಹೆಸರಿನ ಬಗೆಗೆ ವಿರೋಧವಾಗಿದ್ದರೂ, ರಾಜ್ಯಕ್ಕೆ ಹೆಸರು ತಂದ  ಬಹುಮಾನವನ್ನು ಅವರು ಪಡೆದುಕೊಂಡರು.

                  ದೇವರಾಜ ಅರಸರು ಕರ್ನಾಟಕ  ಎಂಬ ಹೆಸರನ್ನು ಸದನದ ಒಳಗೆ ಮತ್ತು ಹೊರಗೆ,  ಎರಡೂ  ಕಡೆಗಳಲ್ಲಿ ವಿರೋಧಿಸಿದ್ದರು. ಕರ್ನಾಟಕ ಆಗುವಾಗ ಮತ್ತು ಆ ಮೇಲೆ,  ಅವರು ಈ ಹೆಸರನ್ನು ನಖಶಿಖಾಂತವಾಗಿ ಎದುರುಸಿದ್ದರು. ಮೈಸೂರು ಹೆಸರನ್ನು ಬಿಟ್ಟುಕೊಡಲು ಅವರು ಸುತರಾಂ ಸಿದ್ಧರಿರಲಿಲ್ಲ.

                    1972ರಲ್ಲಿ ಹೊಸ ಚುನಾವಣೆಗಳು ನಡೆದ ದೇವರಾಜ ಅರಸರು  ಮುಖ್ಯಮಂತ್ರಿಯಾದರು. ಆಗಲೂ   ಅವರು ಕರ್ನಾಟಕ ಹೆಸರಿನ ಬಗೆಗೆ  ಅನುಕೂಲ ಭಾವನೆ ಹೊಂದಿರಲೇ ಇಲ್ಲ. ಪ್ರತಿರೋಧ ಭಾವನೆ ಇರಿಸಿಕೊದರು.
                    ಕರ್ನಾಟಕ ಹೆಸರಿನ ಬಗೆಗೆ ಆಗ ಬಹು ನಿಖರದ ಹೋರಾಟ ಹೂಡಿದವರೆಂದರೆ,  ಹಾಸನದ ಶಾಸಕರದ ಕೆ.ಎಂ.ರುದ್ರಪ್ಪನವರು. ಅವರು ಹಿಂದಿನಿಂದಲೂ ಕರ್ನಾಟಕ ಏಕೀಕರಣವಾದಿಗಳು. 

                  1948ರಲ್ಲಿ  ದಾವಣಗೆರೆಯಲ್ಲಿ  ನಡೆದಿದ್ದ ಕರ್ನಾಟಕ ಯುವಕ ಪರಿಷತ್ತಿಗೆ  ಅವರು  ಅಧ್ಯಕ್ಷರಾಗಿದ್ದರು.

                   ಕರ್ನಾಟಕ ಏಕೀಕರಣದ ಬಗೆಗೆ ಒತ್ತಾಯ ಪಡಿಸುದೇ ಆ ಯುವಕ ಪರಿಷತ್ತಿನ ಉದ್ದೇಶವಾಗಿದ್ದಿತು.

                  ಈ ಕರ್ನಾಟಕ ರಾಜ್ಯವು ಮೈಸೂರು ಎಂಬ ಹೆಸರನು ಪಡೆದು  ಅಸ್ತಿತ್ವಕ್ಕೆ ಬರಬೇಕೆನ್ನುವುದು ಆಗ ಯಾರೊಬ್ಬರ ಕನಸು ಮನಸ್ಸಿನಲ್ಲಿಯೂ  ಇರಲಿಲ್ಲ.

                    ಶಾಸಕ ರುದ್ರಪ್ಪನವರು ರಾಜ್ಯದ ಹೆಸರನ್ನು ಮೈಸೂರಿಗೆ ಬದಲಾಗಿ  ಕನಾಟಕ ಮಾಡಬೇಕೆಂದು ಮುಖ್ಯಮಂತ್ರಿ ದೇವರಾಜ ಅರಸರೆದುರು ಪ್ರಸ್ತಾಪಿಸಿದರು.

                  ಆದರೆ,ಅವರು ಆ ವಿಚಾರವನ್ನು, ಸಹಾನುಭೂತಿಯಿಂದ ಕಾಣಲಿಲ್ಲ.   'ನಿಮಗೆಲ್ಲೋ ಹುಚ್ಚು' ಎನ್ನುವ ಧಾಟಿಯಲ್ಲಿ ಅವರು ಮಾತನಾಡಿದರು.

                 ಮೈಸೂರು ಎಂಬ ಹೆಸರನ್ನು ಒಪ್ಪಿಕೊಂಡ ಕಾರಣದಿಂಲೇ  ಕನ್ನಡ  ನಾಡಿನ ಪ್ರದೇಶಗಳು ಒಂದಾಗುವುದು ಸಾಧ್ಯವಾಯಿತು. ಇಲ್ಲದಿದ್ರೆ ಮೈಸೂರು ಈ ರಾಜ್ಯ ಪುನಃರ್ಘಟನೆಗೆ ಒಪ್ಪುತ್ತಲೇ  ಇರಲಿಲ್ಲವೆಂದು   ದೇವರಾಜ ಅರಸರು ರುದ್ರಪ್ಪನವರನ್ನು ಅವರ  ಪ್ರಯತ್ನದಿಂದ ತಡೆಯಲು ಯತ್ನಿಸಿದರು.

                ಆದರೆ, ರುದ್ರಪ್ಪನವರು ಗೆಲಿಲಿಯೋ ಮಾದರಿಯವರು. ಭೂಮಿಯು ಸೂರ್ಯನ ಸುತ್ತಲೂ ಚಲಿಸುವುದೆಂದು, ಗೆಲಿಲಿಯೋ  ತನ್ನ  ನಿಲುವಿಗೆ ಗಟ್ಟಿಯಾಗಿ  ಅಂಟಿಕೊಂಡು  ನಿಂತಂತೆ, ಅವರು ರಾಜ್ಯಕ್ಕೆ ಕರ್ನಾಟಕ ಎಂಬ ನೈಜ ಹೆಸರೇ ಇರಬೇಕೆನ್ನುವ ತಮ್ಮ ನಿಲುವಿಗೆ ಭದ್ರವಾಗಿ ಅಂಟಿಕೊಂಡು ನಿಂತರು.
                  ಅವರು ಸಮಾ ಅಭಿಪ್ರಾಯದ ಶಸಕರ ಮೇಳವನ್ನು ಕಟ್ಟಿಕೊಂಡು ಹೋಗಿ ಅರಸರ  ಮೇಲೆ ಒತ್ತಡ  ತಂದರು. ಕರ್ನಾಟಕ ಹೆಸರಿನ ಬಗೆಗೆ ಸಹಮತವುಳ್ಳ ಸದಸ್ಯರು ಉತ್ತರ  ಕರ್ನಾಟಕದಲ್ಲಿ ಇದ್ದಂತೆ, ಮೈಸೂರು ಪ್ರದೇಶದಲ್ಲಿಯೂ  ಇದ್ದರು.

               ತಮ್ಮ ಮೇಲೆ ಒತ್ತಡ ಹೆಚ್ಚದಂತೆ,  ದೇವರಾಜ ಅರಸರು ಕುಶಲ ರಾಜಕಾರಣಿಯ  ಪಾತ್ರ ಆಡಬೇಕೆಂದರು.  ರಾಜಕೀಯದಲ್ಲಿ  ಆದರ್ಶವೇನೂ ಇಲ್ಲ,  ಅದು  ಯಾವುದು ಸಾಧ್ಯವೋ ಅದನ್ನು ಸಾಧಿಸುವ ಕಲೆ ಎನ್ನುವುದನ್ನು ಅವರು ಬಲ್ಲರು.
                 ಹೆಚ್ಚು ಜನ ಸದಸ್ಯರಿಗೆ ಬೇಕಾದರೆ ತಾನೇಕೆ ಅದನ್ನು ಬೇಡ  ಎನ್ನಬೇಕು ಎಂದು  ಅವರು ತಮ್ಮೊಳಗೇ ತರ್ಕಿಸಿದರು. ಆದರೂ, ಅವರ ಮನಸ್ಸಿನಲ್ಲಿ ಈ ರಾಜ್ಯದ  ಹೆಸರು  ಮೈಸೂರೆಂದೇ ಇರಬೇಕೆಂದು ಇದ್ದಿತು.

                ಬಹಳಷ್ಟು ಬಲವಂತ ಬಂದ ಮೇಲೆ ಅವರು ಒಂದು ದಿನ ರುದ್ರಪ್ಪನವರಿಗೆ ಹೇಳಿದರು.'ಆಗಲಿ' ನಿಮ್ಮ ಮಾತಿನಂತೆಯೇ ಆಗಲಿ, ಹೆಚ್ಚು ಜನ ಶಾಸಕರು ಕರ್ನಟಕ ಎಂಬ ಹೆಸರಿನ ಪರವಾಗಿ ಇದ್ದರೆ ನನ್ನ ಅಭ್ಯಂತರವೇನೂ ಇಲ್ಲ'  ಎಂದು ಅವರು ಹೇಳಿದ ತಕ್ಷಣವೇ ರುದ್ರಪ್ಪನವರು  ಹಿಗ್ಗಿ ಹೀರೇಕಾಯಿ ಆದರು.

             "ಆದರೆ, ಈ ಹೆಸರಿನ ಬಗೆಗೆ ಪರಮಾವಧೀ ಒಮ್ಮತ  ಬೇಕು. ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಮೂರನೆಯ ಎರಡು ಭಾಗದಷ್ಟು ಸದಸ್ಯರ ಒಪ್ಪಿಗೆಯಾದರು ಬೇಕು" ಎಂದು ಅರಸರು ಅವರಿಗೆ ಹೇಳಿದರು.
ಈ ಕರಾರು ಹಾಕುವಾಗ, ಕರ್ನಾಟಕ ಹೆಸರಿನ ಬಗೆಗೆ ಅಷ್ಟು  ಬಹುಮತ ಬರಲಾರದೆನ್ನುವ ಭರವಸೆ ಅರಸರಿಗೆ ಇದ್ದು. ಅಕ್ಕಿ ಇದ್ದಂತೆಯೂ ಇರಬೇಕು. ನೆಂಟರು ಸತುಂಷ್ಟರೂ ಆಗಬೇಕು ಎನ್ನುವ  ಅಪೇಕ್ಷೆ ಅವರಿಗೆ ಇದ್ದಿತು.

             ಹೆಸರಿನ ಬಗೆಗೆ ಅರಸರಿಂದ ಒಪ್ಪಿಗೆ ಪಡೆದ ಮೇಲೆ ಕೆ.ಎಂ. ರುದ್ರಪ್ಪನವರು ತಮ್ಮ ಪ್ರಚಾರ ಆಂದ ಆರಂಭಿಸಿದರು. ಆಗ ರಾಮಕೃಷ್ಣ ಹೆಗ್ಗಡೆಯವರು ವಿರೋಧ ಪಕ್ಷದ ನಾಯಕರಾಗಿ ವಿಧಾನ ಪರಿಷತ್ತಿನಲ್ಲಿ ಇದ್ದರು. ಪರಮಾವಧಿ ಬೆಂಬಲ  ಪಡೆಯಲು ಅವರು ಹೆಗ್ಗಡೆಯವರ  ಬೆಂಬಲ ಕೋರಿದರು.
        










          ಸಂಸ್ಥಾ ಕಾಂಗ್ರೆಸ್ಸಿನ ಸದಸ್ಯರ ಬೆಂಬಲವನ್ನಲ್ಲದೆ, ತಾವು ಯಾರಿಗೆ ಹೇಳುವುದು ಸಾಧ್ಯವೋ ಅವರೆಲ್ಲರಿಗೂ ತಾವು ಹೇಳುವುದಾಗಿ ಹೆಗ್ಗಡೆಯವರು  ಮಾತು ಕೊಟ್ಟರು.  

                ರುದ್ರಪ್ಪನವರ ಪ್ರಯತ್ನದಲ್ಲಿ ಆಗ ಬಹು ದೊಡ್ಡ ಧೈರ್ಯ  ಕಾಣಿಸಿಕೊಂಡಿತು. ಅವರು ಎಲ್ಲ ಸದಸ್ಯರನ್ನು ಕಂಡು, ಕರ್ನಾಟಕ ಹೆಸರಿನ ಮಹತ್ವವನ್ನು ಅವರ ಮನಸ್ಸಿನ ಮೇಲೆ ಬಿಂಬಿಸಿದರು.
                 ಹೆಸರಿನ ಪ್ರಸ್ತಾಪ ವಿಧಾನಸಭೆಯಲ್ಲಿ ಬಂದು ಅದರ ಮೇಲೆ  ಮತದಾನ ನಡೆಯಿತು. ಎರಡು ಮೂರಾಂಶ ಮತ ಕರ್ನಾಟಕ ಹೆಸರಿನ ಪರವಾಗಿ ಬಂದ ಮೇಲೆ, ವಿಧಾನ ಪರಿಷತ್ತು ಅದನ್ನೇ ಅನುಸರಿಸಿತು. ಹೆಸರನ್ನು ಒಪ್ಪಿಕೊಳ್ಳಲು ಅರಸರಿಗೆ ಆಗ ಅಭ್ಯಂತರ ಉಳಿಯಲಿಲ್ಲ. ತನಾಗಿಯೇ ಬಂದ ಕಿರಿಟ ಅರಸರ ತಲೆಯನ್ನು  ಅಲಂಕರಿಸಿತು.

                ಕರ್ನಾಟಕ ಎಂಬ ಹೆಸರನ್ನು ತರುವ  ಬಗೆಗೆ ಕೆ.ಎಂ. ರುದ್ರ್ಪಪ್ಪನವರು ಮಾಡಿದ  ಕೆಲಸವನ್ನು ಕನಾಟಕದ ಜನರು ಕೃತಜ್ಞತೆಯಿಂದ ಸ್ಮರಿಸಬೇಕು.




ಸಂಗ್ರಹ :     ಡಾ|| ಪಾಟೀಲ ಪುಟ್ಟಪ್ಪನವರ "ನಮ್ಮ ಚೆಲುವ ಕನ್ನಡ ನಾಡು" ಹೊತ್ತಗೆಯಿಂದ ಆಯ್ಕೆ,      
                     ಉಳ್ಳಾಲ ಪುರಸಭಾ ಗ್ರಂಥಾಲಯ.

2 comments: