Friday, November 12, 2010

***ಸಮುದ್ರ ತಳದ ಕೇಬಲ್ ಗಳು***


ತಂತಿಯ ಮೂಲಕ ಸಂದೇಶ ಕಳಿಸುವ ಟೆಲಿಗ್ರಾಫ್ ಕೇಬಲ್ ಗಳು ತಯಾರಾದದ್ದು 1846ರ ಕಾಲದಲ್ಲಿ. ಇವುಗಳಲ್ಲಿ ಮೋರ್ಸ್ ಭಾಷೆಯಲ್ಲಿ ಕಳುಹಿಸುವ ಸಂದೇಶವೇ ಟೆಲಿಗ್ರಾಫ್. ಭೂ ಖಂಡಗಳ ನಡುವೆ ಕೇಬಲ್ ಗಳನ್ನು ಹಾಕಬೇಕಾಯಿತು.  1850ರಲ್ಲಿ ಇಂಗ್ಲಿಷ್ ಕಾಲುವೆಯ ಕೆಳಗೆ ಮೊತ್ತ ಮೊದಲ ಸಮುದ್ರ ತಡಿಯ ಕೇಬಲ್, ಹಾಸಲಾಯಿತು. ಆದರೆ  ಉಪ್ಪು ನೀರು ಸಮುದ್ರ ಪ್ರವಾಹ ಮತ್ತು ನೀರಿನ ಭಾರೀ ಒತ್ತಡಗಳಿಂದಾಗಿ ಈ ಕೇಬಲ್ ಬೇಗನೆ ಹಾಳಾಯಿತು. ಹಲವಾರು ತಾಂತ್ರಿಕ ಆವಿಷ್ಕಾರಗಳ ಬಳಿಕ  ಸಮುದ್ರದ ಕೆಳಗೆ ಸುರಕ್ಷಿತವಾಗಿ  ಇರಬಲ್ಲ ಕೇಬಲ್ ತಯಾರಾಯಿತು.  ಅಂಟ್ಲಾಂಟಿಕ್ ಸಾಗರದ ಕೆಳಗೆ ಕೇಬಲ್  ಹಾಕಲು ಹಲವಾರು ಪ್ರಯತ್ನಗಳು ನಡೆದವು. ಭಾರೀ ತೂಕದ ಕೇಬಲ್ ಗಳನ್ನು  ಸಮುದ್ರದ ತಳಕ್ಕೆ ಇಳಿಸುತ್ತ ಒಯ್ಯಲು ಬೃಹತ್ ಹಡಗುಗಳ ನಿರ್ಮಾಣವಾಯಿತು. ಕೊನೆಗೂ 1858ರಲ್ಲಿ ಈ ಕೆಲಸ  ಯಶಸ್ವಿಯಾಯಿತು. ಇಂಗ್ಲೆಂಡ್ ನ ಆಗಿನ ರಾಣಿ ವಿಕ್ಟೋರಿಯಾ, ಅಮೆರಿಕಾದ ಅಧ್ಯಕ್ಷ ಬುಚಾನನ್ ಗೆ ಜಗತ್ತಿನ ಮೊತ್ತ ಮೊದಲ  ಸಾಗರಾಂತರ ಟೆಲಿಗ್ರಾಫ್ ಸಂದೇಶ ಕಳಿಸಿದಳು. 99 ಶಬ್ದಗಳ ಈ ಸಂದೇಶ ರವಾನೆಗೊಳ್ಳಲು 18 ಗಂಟೆಗಳೇ ಹಿಡಿದಿದ್ದವು!!!


(ಸಮುದ್ರ ತಳದಲ್ಲಿ ಕೇಬಲ್ ಗಳನ್ನು ಹಾಸಲು ಭಾರೀ ಹಡಗುಗಳ ಸಹಾಯ ಬೇಕು.)

1863ರಲ್ಲಿ  ಮುಂಬಯಿಯಿಂದ ಸೌದಿ ಅರೇಬಿಯಾಗೆ ಸಾಗರತಳದ ಕೇಬಲ್ ಸಂಪರ್ಕ ತಯಾರಾಯಿತು. 1870ರಲ್ಲಿ ನಾಲ್ಕು ಕೇಬಲ್ ಕಂಪೆನಿಗಳು  ಸೇರಿ ಮುಂಬಯಿಯಿಂದ ಲಂಡನ್ ಗೆ  ಕೇಬಲ್ ಹಾಸಿದವು. 20ನೆಯ ಶತಮಾನದಲ್ಲಿ ಟೆಲಿಗ್ರಾಫ್ ಕೇಬಲ್ ಗಳ ಜಾಗದಲ್ಲಿ ಟೆಲಿಫೋನ್ ಕೇಬಲ್ ಗಳನ್ನು ಸಮುದ್ರದ ತಳದಲ್ಲಿ  ಹಾಸಲಾಯಿತು.ಈ ಕೇಬಲ್ ಗಳ ಮೂಲಕ ಶಬ್ದ ತರಂಗಗಳು ಸಾಗಿದವು. ಇಂದು ಸಾಗರತಳದ ಕೇಬಲ್ ಗಳು  ಅಂಟಾರ್ಕ್ಟಿಕಾ  ಬಿಟ್ಟರೆ  ಬೇರೆಲ್ಲ ಭೂಖಂಡಗಳ ನಡುವೆ ಸಂಪರ್ಕ ನಿರ್ಮಿಸಿವೆ.
1980ರ ಬಳಿಕ  ಫೈಬರ್ ಆಪ್ಟಿಕ್ಸ್  ಎಂಬ ವಿಶೇಷ ತಂತಿಗಳ ಬಳಕೆ ಆರಂಭವಾಯಿತು. ಇವುಗಳಲ್ಲಿ ಡಿಜಿಟಲ್ ಮಾಹಿತಿ ಹರಿಯುತ್ತದೆ. ಟೆಲಿಫೋನ್  ಸಂಭಾಷಣೆ ಮಾತ್ರವೇ ಅಲ್ಲ, ಇಂಟರ್ ನೆಟ್ ಮತ್ತು ಖಾಸಾಗಿ ಮಾಹಿತಿಗಳಿಗೂ ಡಿಜಿಟಲ್ ರೂಪದಲ್ಲಿ ಇದರಲ್ಲಿ ಭಾರೀ  ವೇಗದಲ್ಲಿ ಸಾಗುತ್ತವೆ.



1988ರಲ್ಲಿ ಸಾಗರ ತಳದಲ್ಲಿ ಫೈಬರ್ ಆಪ್ಟಿಕ್ಸ್ ಕೇಬಲ್ ಗಳನ್ನು ಬಳಸಲಾಯಿತು. ಇಂದಿನ ಕೆಬಲ್ ಗಳು ಬಳಸಲಾಯಿತು. ಇಂದಿನ ಎಲ್ಲ ಆಧುನಿಕ ಸಂಪರ್ಕ  ತಂತ್ರಜ್ಞಾನದ ಕೇಬಲ್ ಗಳನ್ನು ಬಳಸಲಾಗುತ್ತದೆ. ಹಿಂದಿನ ಕಾಲದ ಕೇಬಲ್ ಗಳು ಸಾಗರ ತಳದಲ್ಲಿ ತುಂಡಾಗುವುದು, ನೀರಿನಿಂದಾಗಿ ಕೆಡುವುದು ಸಾಮಾನ್ಯವೇ  ಆಗಿತ್ತು. ಆಧುನಿಕ ಕೇಬಲ್ ಗಳು ಸುಮಾರು ಏಳು ಸೆಂಟಿಮೀಟರ್ ದಪ್ಪಗೆ  ಇದ್ದು, ಪ್ರತಿಯೊಂದು ಮೀಟರ್ ಕೇಬಲ್ ಹತ್ತು ಕಿಲೋ ಭಾರವಾಗಿರುತ್ತದೆ. ಒಳಗಿನ ಕೇಬಲ್ ಸುತ್ತ ಹಲವಾರು ರಕ್ಷಣಾ  ಹೊದಿಕೆಗಳಿರುತ್ತವೆ.

ಸಾಗರ ತಳದ ಕೇಬಲ್ ನ ಒಳಗೆ ಫೈಬರ್ ಆಪ್ಟಿಕ್ಸ್ ನ ತಂತಿಗಳು ಇರುತ್ತವೆ. ಅದರ ಹೊರಗೆ ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಿಯಲಾಗಿರುತ್ತದೆ. ಇದನ್ನು ಹಿತ್ತಾಳೆಯ ಟ್ಯೂಬ್ ನ ಒಳಗೆ ಹಾಕಿರಲಾಗುತ್ತದೆ. ಇದರ ಹೊರಗೆ ಪಾಲಿ ಕಾರ್ಬೊನೇಟ್ ಹೊದಿಕೆ. ಇದನ್ನು ಜಲನಿರೋಧಕ ಅಲ್ಯುಮಿನಿಯಮ್ ಕವಚದಿಂದ ರಕ್ಷಿಸಲಾಗುತ್ತದೆ. ಈ ಜೋಡಣೆ  ಸಮುದ್ರ ಪ್ರವಾಹಗಳ  ಒತ್ತಡದಲ್ಲಿ  ನಾಶವಾಗದಂತೆ ಉಕ್ಕಿನ ತಂತಿಗಳ ಹೊರಕವಚ ಇದೆ. ಇದನ್ನು ಮೈಲಾರ್ ಟೇಪ್ ನಿಂದ  ಬಿಗಿಯಲಾಗುತ್ತದೆ. ಎಲ್ಲಕ್ಕಿಂತ ಹೊರಗೆ ಪಾಲಿಥೈಲೀನ್ ಹೊದಿಕೆ ಇರುತ್ತದೆ.

ಷ್ಟೆಲ್ಲಾ  ಭದ್ರತೆ ಇದ್ದರೂ ಸಮುದ್ರ ತಳದ ಕೇಬಲ್ ಗಳು ತುಂಡಾಗಬಹುದು. ಮೀನುಗಾರಿಕೆಯ ಹಡಗುಗಳಿಂದ, ಲಂಗರುಗಳಿಂದ, ಸಮುದ್ರತಳದ ಪ್ರಾಕೃತಿಕ ಪ್ರಕೋಪಗಳಿಂದ ಕೆಡಬಹುದು. ಶಾರ್ಕ್ ಮೀನುಗಳು ಅವುಗಳನ್ನು ಕಚ್ಚಿ  ತುಂಡು ಮಾಡಬಹುದು.

2008ರಲ್ಲಿ ಸುಯೆಜ್ ಕಾಲುವೆಯ ಬಳಿ  ಹಡಗುಗಳಿಂದಾಗಿ ಸಾಗರಾಂತರ ಕೇಬಲ್ ಗಳು ಕಡಿದು ಹೋದವು. ಇದರಿಂದ  ಭಾರತ ಮತ್ತು ಕೊಲ್ಲಿ ದೇಶಗಳ ಸಂಪರ್ಕ ವ್ಯವಸ್ಥೆಗಳು ಮತ್ತು ಇಂಟರ್ ನೆಟ್ ಜಾಲ ಅಸ್ತವ್ಯಸ್ತವಾಗಿದ್ದವು.

***********************

1 comment:

  1. ಉತ್ತಮ ಮಾಹಿತಿ... ಧನ್ಯವಾದಗಳು.
    ಬರವಣಿಗೆ ಸಾಗುತ್ತಿರಲಿ.

    ReplyDelete