Friday, November 5, 2010

***ಜೀವನ***


ಅಂದು ಜೋರಾಗಿ ಬೀಸುವ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆ,  ಗುಡುಗು ಮಿಂಚುಗಳ ನಡುವೆ ಮಗುವಿನ ಆಕ್ರಂದನ , ಜೊತೆಗೆ ಅಳಬೇಡ ಎಂದು ಸಮಧಾನಿಸುತ್ತಿರುವ ತಾಯಿ. ಆ ಮಗುವಿನ ನಿಲ್ಲದ ಅಳು ಏನಕ್ಕೋ ತವಕಿಸುತ್ತಿದೆ. ಅದು ಏನು ಎಂಬುದು ಆ ತಾಯಿಗೆ ತಿಳಿಯುತ್ತಿಲ್ಲ. ಅಳು ನಿಲ್ಲಿಸಲು ತಿಳಿಯದ ತಾಯಿಗೆ , ತನ್ನ ಗಂಡನಿಂದ ಸಹಿಸಲಾರದ ಮಾತುಗಳು.  ಆದರೆ ಅದನ್ನು ತಿಳಿಯದೆ ಸಮಾಧಾನಿಸುತ್ತಿರುವ ಆ ತಾಯಿ ಇನ್ನೂ ತಾಯಿಯ ಪ್ರಜ್ಞೆಯೇ ಇಲ್ಲದೆ ಇರುವ 12 ರ ಹರೆಯದ ಹೆಣ್ಣು.


ಜೋ ಜೋ ಲಾಲಿ ನಾ ಹಾಡುವೆ......ಚಿನ್ನ ನಿನ್ನಾ ಮುದ್ದಾಡುವೆ.......



ಶ್ ಶ್ ಶ್...ಸುಮ್ಮನಿರಿ ಮಗು ಮಲಗಿದೆ.....

ಅಂತೂ ಇಂತೂ  ಕೊನೆಗೆ ಅಳು ನಿಲ್ಲಿಸಿದ ಕಂದ ಮಲಗಿದೆ....ಮಲಗಿದೆ......

ಲಾಲಿ ಹಾಡಿದ್ದು ನಾನೇ ಅಂದು ಕೊಳ್ಳಬೇಡಿ......




ಈ ಮೇಲಿನ ಸಾಲುಗಳನ್ನು ಏಕೆ ಬರೆದೆ ಅಂದ್ರೆ, ಏನೂ ತಿಳಿಯದ ಮಕ್ಕಳಿಗೂ ಬಾಲ್ಯದಲ್ಲೇ ಮದುವೆ ಮಾಡಿ ಮಕ್ಕಳನ್ನು ಹೆರುವ ಯಂತ್ರವನ್ನಾಗಿಸುವ ಅಂದಿಗೇ ಮುಗಿದು ಹೋಗಿಲ್ಲ. ಇಂದೂ ಇದೆ..ಅದು ಹಿರಿಯರ ಸಮ್ಮುಖದಲ್ಲಿ ಮಾತ್ರ ನಡೆಯುವಂತದ್ದಲ್ಲ. ಅವರಾಗಿಯೇ ತೆಗೆದು ಕೊಳ್ಳುವ ನಿರ್ಧಾರಗಳು.



ಹೇಗೆ ಅಂತೀರಾ....ಈಗ ಪ್ರೌಢಶಾಲೆ ಬಿಡಿ ಪ್ರಾಥಮಿಕ ತರಗತಿಯಲ್ಲಿರುವಾಗಲೇ ಪ್ರೀತಿ ಬೆಳೆದು  ಮರವಾಗಿ ಬಿಡುತ್ತದೆ.  ಪ್ರೀತಿ, ಮದುವೆ ಎಂಬುದರ ಅರಿವಿಲ್ಲದೆ ಇರುವ ಈ ಮಕ್ಕಳು ಪ್ರೌಢ, ಕಾಲೇಜು ಜೀವನಕ್ಕೆ ಬರುವಾಗ " ಮನೆಯವರು ಹೇಳೊದನ್ನ ಕೇಳಿದ್ರೆ ಈ ಜನುಮದಲ್ಲಿ ನಾವು ಮದುವೆ ಆಗಲ್ಲ. ಬಾ  ಎಲ್ಲಾದರೂ ದೂರ ಹೋಗೋಣ. ಮುಂದೆ ಏನಾಗುತ್ತೋ ಆಮೇಲೆ  ನೋಡಿದರಾಯಿತು. ಸ್ವಲ್ಪ ದಿನ ಮನೆಯವರು ಬೊಬ್ಬೆ ಹಾಕ್ತಾರೆ ಆಮೇಲೆ ಎಲ್ಲಾ ತಾನಾಗಿಯೇ ಸರಿಹೋಗುತ್ತೆ" ಅಂತ ಹೇಳಿ ಅವರಿಗೆ ಇಷ್ಟ ಬಂದ ಹಾಗೆ  ಮದುವೆ ಮಾಡಿಕೊಂಡು ಜೀವನ ಮಾಡ್ತಾರೆ.  ಅದು ಜೀವನ ಅಲ್ಲ. ಆದರೆ ಅವರ ಪ್ರಕಾರ ಅಷ್ಟಕ್ಕೆ ನಾವು ದೊಡ್ಡವರಾಗಿ ಬಿಟ್ವಿ ಅಂತ.



ಇನ್ನು ಏನಪ್ಪಾ ಅಂದ್ರೆ ಜೀವನದ ಬಗ್ಗೆ  ಕಿಂಚಿತ್ತೂ ಕಾಳಜಿ ಇಲ್ಲದೆ,  ಉಯ್ಯಾಲೆ ಕಟ್ಟಿ ಆಡೋ ಸಮಯದಲ್ಲಿ ಅವ್ರೇ ಒಂದು ಮಗುವಿಗೆ ಉಯ್ಯಾಲೆ  ತಯಾರು ಮಾಡೋವರೆಗೂ ಬೆಳೆದು ಬಿಟ್ಟಿರುತ್ತಾರೆ. ಅಂದರೆ ಆಗಲೇ ಆ ಪುಟ್ಟ ಸಂಸಾರಕ್ಕೆ ಪುಟ್ಟ ಮಗು ಬಂದು  ಅದನ್ನ ಬೆಳೆಸೋಕೂ ಆಗದೆ,  ಅಳೋದನ್ನಾ ನಿಲ್ಲಿಸೋಕೂ ಆಗದೆ ಅವರವರಲ್ಲಿಯೇ ಕಲಹ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲ.  ಕೊನೆಗೆ ಈ ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ. ಎಲ್ಲಾ ನಿನ್ನಿಂದಲೇ ಆಗಿದ್ದು, ಹಾಗ ಹೀಗೆ ಎಂದು ಪರಸ್ಪರರನ್ನೇ ದ್ವೇಷಿಸತೊಡಗುತ್ತಾರೆ........



ಈ ವಿಚಾರಗಳ ಬಳಕೆ ಏಕೆ ಮಾಡಿದೆ ಅಂದರೆ ನನ್ನ  ಕಣ್ಣ ಮುಂದೆಯೇ ಇಂತಹ ಅನೇಕ ಘಟನೆಗಳು ನಡೆದಿರುವುದು ಇದೆ.
ಈಗಲೂ ಜೀವಿಸಲು ಕಷ್ಟಪಡುತ್ತಿರುವುದೂ ಇದೆ.

ಓದೋ ಸಮಯದಲ್ಲಿ ಓದುತ್ತಾ, ದುಡಿಯೋ ಸಮಯದಲ್ಲಿ ದುಡಿಯುತ್ತಾ, ಮದುವೆ ಎಂಬ ಸಮಯದಲ್ಲಿ ಮದುವೆ ಮಾಡಿ ಸುಂದರವಾದ ಜೀವನವನ್ನು ಸಾಗಿಸಬೇಕು.
ಎಲ್ಲದ್ದಕ್ಕಿಂತಲೂ ಮುಂಚಿತಾಗಿ ಜೀವನ ಅಂದ್ರೆ ಏನು ಎಂಬುದರ ಬಗ್ಗೆ ಅರಿವು ಮೂಡಿರಬೇಕು.
(ಪವಿತ್ರವಾದ ಈ ದೇಶದಲ್ಲಿ ಹುಟ್ಟಿದ ನಾವು ಈ ದೇಶಕ್ಕೆ ಏನಾದರೂ ಸಾಧಿಸಿ, ಕೀರ್ತಿಯನ್ನು ನೀಡಬೇಕು. ನೀಡಬೇಕಾದ ಗೌರವ ನೀಡಬೇಕು. )
ಸಾಧಿಸಲು ಬೇಕಾದಷ್ಟು ಸಮಯ ಇರುವಾಗ ಆ ಸಮಯವನ್ನು ವ್ಯರ್ಥಮಾಡಬಾರದು.
ಏನೇ ಆದರೂ ಸ್ವಲ್ಪ ಯೋಚಿಸಿ. ಅಥವಾ ತಿಳಿದವರಲ್ಲಿ ಹೇಳಿ ಸಲಹೆ ಪಡೆಯಿರಿ. ಪ್ರೀತಿ ಕುರುಡು ನಿಜ ಆದರೆ ಅದರಿಂದ ಇಡೀ ಜೀವನವೇ ಕುರುಡಾಗಬಾರದು.

(ಬರೆದ ಬರಹದಲ್ಲಿರುವ ತಪ್ಪು ಒಪ್ಪುಗಳಿಗೆ ಕ್ಷಮೆ ಇರಲಿ)

No comments:

Post a Comment